Milk Price Hike: Following Nandini, another milk brand delivers a shock to consumers! Price increased by ₹4 per litre! – ಕರ್ನಾಟಕದ ನಂದಿನಿ ಬ್ರ್ಯಾಂಡ್ ಹಾಲಿನ ಬೆಲೆ ಏರಿಕೆಯ ಬೆನ್ನಲ್ಲೇ, ದೇಶದ ಇತರ ಪ್ರಮುಖ ಹೈನುಗಾರಿಕಾ ದೈತ್ಯರಾದ ಅಮುಲ್ (Amul) ಮತ್ತು ಮದರ್ ಡೈರಿ ಸಂಸ್ಥೆಗಳೂ ಸಹ ತಮ್ಮ ಹಾಲಿನ ದರವನ್ನು ಲೀಟರ್ಗೆ ₹2 ರಿಂದ ₹4 ರವರೆಗೆ ಭಾರಿ ಹೆಚ್ಚಳ ಮಾಡಿವೆ. ಈ ಪರಿಷ್ಕೃತ ನೂತನ ದರಗಳು ನವೆಂಬರ್ 12, 2026 ರಿಂದ ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬರುತ್ತಿವೆ

ನಂದಿನಿ, ಮದರ್ ಡೈರಿ ಬೆನ್ನಲ್ಲೇ ದೇಶದ ಮತ್ತೊಂದು ಡೈರಿ ಕಂಪನಿ ಸಾಮಾನ್ಯ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಭಾರತದ ಅತಿ ದೊಡ್ಡ ಹೈನುಗಾರಿಕಾ ಒಕ್ಕೂಟವಾದ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF), ತನ್ನ ಜನಪ್ರಿಯ ಬ್ರ್ಯಾಂಡ್ ‘ಅಮುಲ್’ ಹಾಲಿನ ಪ್ಯಾಕೆಟ್ಗಳ ಬೆಲೆಯನ್ನು ದೇಶಾದ್ಯಂತ ಶೇಕಡಾ 4 ರಿಂದ 5 ರಷ್ಟು ಹೆಚ್ಚಳ ಮಾಡಿದೆ. ಈ ಪರಿಷ್ಕೃತ ನೂತನ ದರಗಳು ನವೆಂಬರ್ 12, 2026 ರಿಂದಲೇ ಅಧಿಕೃತವಾಗಿ ಜಾರಿಗೆ ಬರಲಿವೆ.
ಬೆಲೆ ಏರಿಕೆಗೆ ಪ್ರಮುಖ ಕಾರಣಗಳು :
ಅಮುಲ್ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಜಿಸಿಎಮ್ಎಮ್ಎಫ್ ಸಂಸ್ಥೆಯ ಪ್ರಕಾರ, ಹಾಲಿನ ಉತ್ಪಾದನಾ ವೆಚ್ಚ ಹಾಗೂ ಸಂಸ್ಕರಣಾ ವೆಚ್ಚಗಳ ಹೆಚ್ಚಳವಾಗಿರುವುದು ಹಾಗೂ ಹಸುಗಳ ಮೇವು ಮತ್ತು ಪಶು ಆಹಾರದ ಬೆಲೆ ಏರಿಕೆಯಾಗಿರುವುದು ಹಾಲಿನ ಬೆಲೆ ಏರಿಕೆ ಪ್ರಮುಖ ಕಾರಣ ಎಂದು ತಿಳಿಸಿದೆ. ಇವುಗಳ ಜೊತೆಗೆ ಪ್ಯಾಕೇಜಿಂಗ್ ಸಾಮಗ್ರಿಗಳು ಹಾಗೂ ಸಾರಿಗೆಗೆ ಬಳಸುವ ಇಂಧನದ ಬೆಲೆಯಲ್ಲಿ ಉಂಟಾಗಿರುವ ಏರಿಕೆ ಕೂಡ ಪ್ರಮುಖ ಕಾರಣ ಎಂದು ತಿಳಿಸಿದೆ.
ರೈತರಿಗೆ ಸಿಗಲಿದೆ ಉತ್ತಮ ಲಾಭ:
ಈ ಬೆಲೆ ಪರಿಷ್ಕರಣೆಯಿಂದಾಗಿ ಗ್ರಾಹಕರಿಂದ ಬರುವ ಹೆಚ್ಚುವರಿ ಆದಾಯದ ಸಿಂಹಪಾಲು ನೇರವಾಗಿ ಹಾಲು ಉತ್ಪಾದಿಸುವ ಹೈನುಗಾರಿಕೆ ರೈತರಿಗೇ ತಲುಪಲಿದೆ. ಇದರಿಂದ ಅವರಿಗೆ ಉತ್ತಮ ಆರ್ಥಿಕ ಆದಾಯ ಸಿಗಲಿದ್ದು, ಹಾಲಿನ ನಿರಂತರ ಪೂರೈಕೆಯನ್ನು ಕಾಯ್ದುಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಒಕ್ಕೂಟ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ತನ್ನ ಅಧಿಕೃತ ಪ್ರಕಟಣೆಯಲ್ಲಿ, “ನಮ್ಮ ಅತಿ ಹೆಚ್ಚು ಮಾರಾಟವಾಗುವ, ಶೇಕಡಾ 3 ರಷ್ಟು ಕೊಬ್ಬಿನಾಂಶ ಹೊಂದಿರುವ ಅಮುಲ್ ತಾಜಾ (ಟೋನ್ಡ್) ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ ಕೇವಲ ₹ 2 ರಷ್ಟು (ಶೇ. 3.3 ರಷ್ಟು ಏರಿಕೆ) ಹೆಚ್ಚಿಸಲಾಗಿದೆ. ಹಾಗೆಯೇ, ಶೇಕಡಾ 6 ರಷ್ಟು ಕೊಬ್ಬಿನಾಂಶ ಹೊಂದಿರುವ ಅಮುಲ್ ಗೋಲ್ಡ್ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ ₹ 4 ರಷ್ಟು (ಶೇ. 5.5 ರಷ್ಟು ಏರಿಕೆ) ಹೆಚ್ಚಳ ಮಾಡಲಾಗಿದೆ” ಎಂದು ತಿಳಿಸಿದೆ.
ಇದಕ್ಕೂ ಮುನ್ನ, ಅಮುಲ್ ಸಂಸ್ಥೆಯು ಇದೇ ವರ್ಷದ ಮೇ ತಿಂಗಳಿನಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹ 2 ರಷ್ಟು ಹೆಚ್ಚಿಸಿತ್ತು. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ಯುದ್ಧವನ್ನು ಘೋಷಿಸಿದ ಕೆಲವೇ ವಾರಗಳ ನಂತರ ಆ ಬೆಲೆ ಏರಿಕೆಯನ್ನು ಮಾಡಲಾಗಿತ್ತು.
ಅಮುಲ್ ಹಾಲಿನ ಪರಿಷ್ಕೃತ ಹೊಸ ದರಗಳ ಪಟ್ಟಿ :
ಈ ಇತ್ತೀಚಿನ ಬೆಲೆ ಪರಿಷ್ಕರಣೆಯ ನಂತರ, ಅಮುಲ್ ಹಾಲಿನ ಪ್ರಮುಖ ಪ್ರಕಾರಗಳ ಹೊಸ ದರಗಳು ಈ ಕೆಳಗಿನಂತಿವೆ:
• ಅಮುಲ್ ತಾಜಾ (Amul Taaza): ಇನ್ಮುಂದೆ ಪ್ರತಿ ಲೀಟರ್ಗೆ ₹ 61 ಆಗಲಿದೆ.
• ಅಮುಲ್ ಗೋಲ್ಡ್ (Amul Gold): ಇನ್ಮುಂದೆ ಪ್ರತಿ ಲೀಟರ್ಗೆ ₹ 76 ಆಗಲಿದೆ.
ಮದರ್ ಡೇರಿ ಹಾಲಿನ ದರವೂ ಹೆಚ್ಚಳ :
ಅಮುಲ್ ಸಂಸ್ಥೆಗೂ ಮುನ್ನ ಬುಧವಾರವೇ ಮದರ್ ಡೇರಿ (Mother Dairy) ಸಂಸ್ಥೆಯೂ ಸಹ ಉತ್ಪಾದನಾ ವೆಚ್ಚಗಳ ಹೆಚ್ಚಳವನ್ನು ಉಲ್ಲೇಖಿಸಿ, ತನ್ನ ಎಲ್ಲಾ ಲಿಕ್ವಿಡ್ (ದ್ರವ) ಹಾಲಿನ ಪ್ರಕಾರಗಳ ಬೆಲೆಯನ್ನು ಪ್ರತಿ ಲೀಟರ್ಗೆ ₹ 2 ರಿಂದ ₹ 4 ರವರೆಗೆ ಹೆಚ್ಚಳ ಮಾಡಿದೆ. ಈ ಪರಿಷ್ಕೃತ ನೂತನ ದರಗಳು ನವೆಂಬರ್ 12 ರಿಂದಲೇ ಜಾರಿಗೆ ಬರಲಿವೆ.
ದೆಹಲಿ-ಎನ್ಸಿಆರ್ (Delhi-NCR) ವಲಯದ ಅತಿ ದೊಡ್ಡ ಹಾಲು ಪೂರೈಕೆದಾರ ಸಂಸ್ಥೆಯಾದ ಮದರ್ ಡೇರಿ, ಕೊನೆಯದಾಗಿ ಮೇ 14, 2026 ರಂದು ಹಾಲಿನ ಬೆಲೆಯನ್ನು ಹೆಚ್ಚಿಸಿತ್ತು. ಅದಕ್ಕೂ ಮುನ್ನ ಏಪ್ರಿಲ್ 2025 ರಲ್ಲಿ ಬೆಲೆ ಪರಿಷ್ಕರಣೆ ಮಾಡಲಾಗಿತ್ತು.
ದೆಹಲಿ ಸುತ್ತಮುತ್ತಲಿನ ಎನ್ಸಿಆರ್ (NCR) ವಲಯದಲ್ಲಿ ಮದರ್ ಡೇರಿ ಹಾಲಿನ ಪರಿಷ್ಕೃತ ಹೊಸ ದರಗಳು ಈ ಕೆಳಗಿನಂತಿವೆ:
• ಟೋನ್ಡ್ ಹಾಲು (ಬಲ್ಕ್ ವೆಂಡೆಡ್): ಪ್ರತಿ ಲೀಟರ್ಗೆ ₹ 60 ಆಗಲಿದೆ (ಹಳೇ ಬೆಲೆ ₹ 58 ಇತ್ತು).
• ಫುಲ್ ಕ್ರೀಮ್ ಹಾಲು : ಪ್ರತಿ ಲೀಟರ್ಗೆ ₹ 76 ಆಗಲಿದೆ (ಹಳೇ ಬೆಲೆ ₹ 72 ಇತ್ತು).
• ಟೋನ್ಡ್ ಹಾಲು : ಪ್ರತಿ ಲೀಟರ್ಗೆ ₹ 62 ಆಗಲಿದೆ (ಹಳೇ ಬೆಲೆ ₹ 60 ಇತ್ತು).
• ಡಬಲ್ ಟೋನ್ಡ್ ಹಾಲು : ಪ್ರತಿ ಲೀಟರ್ಗೆ ₹ 56 ಆಗಲಿದೆ (ಹಳೇ ಬೆಲೆ ₹ 54 ಇತ್ತು).
• ಹಸುವಿನ ಹಾಲು : ಪ್ರತಿ ಲೀಟರ್ಗೆ ₹ 65 ಆಗಲಿದೆ (ಹಳೇ ಬೆಲೆ ₹ 62 ಇತ್ತು).
ಮೊದಲು ನಂದಿನಿ, ಇದೀಗ ಅಮುಲ್ ಮತ್ತು ಮದರ್ ಡೇರಿ ಸಂಸ್ಥೆಗಳು ಏಕಕಾಲಕ್ಕೆ ಮಾಡಿರುವ ಈ ಇತ್ತೀಚಿನ ಬೆಲೆ ಪರಿಷ್ಕರಣೆಯಿಂದಾಗಿ, ಗ್ರಾಹಕರು ನವೆಂಬರ್ 12 (ಗುರುವಾರ) ರಿಂದ ತಮ್ಮ ದೈನಂದಿನ ಹಾಲಿನ ಖರೀದಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
