‘Sanatani Akhilesh’ attempts to emerge from the shadow of ‘Mulla Mulayam’: Ayodhya visit is a contemporary necessity. – ರಾಜಕಾರಣದಲ್ಲಿ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುವುದು ಅನಿವಾರ್ಯ. ಅದು ಉತ್ತಮ ರಾಜಕಾರಣಿಯೋರ್ವನ ಲಕ್ಷಣವೂ ಹೌದು. 90ರ ದಶಕದಲ್ಲಿ ಅಲ್ಪಸಂಖ್ಯಾತರ “ಮಸೀಹಾ” ಆಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಮುಲಾಯಂ ಸಿಂಗ್ ಯಾದವ್, ಹಿಂದುತ್ವ ವಿರೋಧಿ ರಾಜಕಾರಣ ಮಾಡಿದ್ದರು. ಆದರೀಗ ಅಖಿಲೇಶ್ ಯಾದವ್ ತಮ್ಮನ್ನು ಸನಾತನಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಅಯೋಧ್ಯೆ ಭೇಟಿ ತೀರ್ಮಾನ, ಸಮಾಜವಾದಿ ಪಕ್ಷದೊಳಗೆ ನಡೆಯುತ್ತಿರುವ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಅಷ್ಟಕ್ಕೂ ಈ ರೂಪಾಂತರಕ್ಕೆ ಏನು ಕಾರಣ? ಇಲ್ಲಿದೆ ಮಾಹಿತಿ.
- ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಲಿರುವ ಅಖಿಲೇಶ್ ಯಾದವ್.
- ತಂದೆ ಮುಲಾಯಂ ಸಿಂಗ್ ಯಾದವ್ ಹಾದಿ ಬಿಡಲಿದ್ದಾರಾ ಅಖಿಲೇಶ್?
- ವರ್ತಮಾನದ ರಾಜಕೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತಿರುವ ಎಸ್ಪಿ ಮುಖ್ಯಸ್ಥ
![]()
ಲಕ್ನೋ: ಅದು 1990ರ ದಶಕ. ಉತ್ತರ ಪ್ರದೇಶದಲ್ಲಿ ರಾಮಜನ್ಮಭೂಮಿ ಚಳುವಳಿ ತನ್ನ ಉತ್ತುಂಗದಲ್ಲಿದ್ದ ಕಾಲ. ರಾಜ್ಯದಲ್ಲಿ ಆಗ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷ (ಎಸ್ಪಿ)ದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್, ಅಯೋಧ್ಯೆಯತ್ತ ಹೊರಟಿದ್ದ ಕರಸೇವಕರ ಮೇಲೆ ಗೋಲಿಬಾರ್ಗೆ ಆದೇಶಿಸಿದ್ದರು. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ಜೋತು ಬಿದ್ದಿದ್ದ ಮುಲಾಯಂ, ಉತ್ತರ ಪ್ರದೇಶದಲ್ಲಿ “ಮುಲ್ಲಾ ಮುಲಾಯಂ” ಎಂದೇ ಖ್ಯಾತರಾದರು. ಅದು ಅವರ ಅಂದಿನ ರಾಜಕೀಯ ಅನಿವಾರ್ಯತೆಯಾಗಿತ್ತು.
ಆದರೆ ಈಗ ಕಾಲ ಬದಲಾಗಿದೆ. ಉತ್ತರ ಪ್ರದೇಶವೂ ಸೇರಿದಂತೆ ದೇಏಆಶ್ಯಂತ ಹಿಂದುತ್ವದ ಸಿದ್ಧಾಂತದ ಕೈ ಮೇಲಾಗಿದೆ. ಈ ಬದಲಾದ ರಾಜಕೀಯ ಪರಿಸ್ಥಿತಿಗೆ ಸಮಾಜವಾದಿ ಪಕ್ಷವನ್ನು ಹೊಂದಿಸುವುದು ಅದರ ಹಾಲಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮುಂದಿರುವ ಸವಾಲಾಗಿದೆ. ಪಕ್ಷವನ್ನು ಮುಲ್ಲಾ ಮುಲಾಯಂ ನೆರಳಿನಿಂದ ಹೊರತಂದು ತಮ್ಮನ್ನು ಸನಾತನಿ ಎಂದು ಬಿಂಬಿಸಿಕೊಳ್ಳಬೇಕಿರುವುದು, ಅಖಿಲೇಶ್ ಯಾದವ್ ಅವರ ಇಂದಿನ ರಾಜಕೀಯ ಅನಿವಾರ್ಯತೆಯಾಗಿದೆ.
ಹೌದು, ಅಖಿಲೇಶ್ ಯಾದವ್ ಅವರು ಎಸ್ಪಪಿ ಕೇವಲ ಅಲ್ಪಸಂಖ್ಯಾತರಿಗೆ ಸೀಮಿತವಾಗಿರುವ ಪಕ್ಷವಲ್ಲ ಎಂದು ಸಾಬೀತುಪಡಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದಕ್ಕಾಗಿಯೇ ಅವರು ಮುಂಬರುವ ಡಿ.12ರಂದು ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಸಮಾಜವಾದಿ ಪಕ್ಷದ ನಾಯಕನ ಭೇಟಿ ಹಿನ್ನೆಲೆಯಲ್ಲಿ, ಅಯೋಧ್ಯೆಯಿಂದ ಸ್ಪರ್ಧಿಸುವಂತೆ ಅಖಿಲೇಶ್ ಯಾದವ್ಗೆ ಯೋಗಿ ಆದಿತ್ಯನಾಥ್ ಸವಾಲು ಕೂಡ ಹಾಕಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಗಳು, ಅವರ ಈ ಭೇಟಿಯನ್ನು “ರಾಜಕೀಯ” ಎಂದು ಕರೆದಿದ್ದಾರೆ.
ಅಖಿಲೇಶ್ ಸನಾತನಿ ವೇಷ:
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿ ಮೂರು ವರ್ಷಗಳ ಬಳಿಕ, ಅಖಿಲೇಶ್ ಯಾದವ್ ಅವರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇದು ಹಿಂದೂ ಮತಗಳನ್ನು ಸೆಳೆಯುವ ಉದ್ದೇಶ ಎಂದು ಆಡಳಿತಾರೂಢ ಬಿಜೆಪಿ ವಿಶ್ಲೇಷಿಸಿದೆ. ಕಳೆದ 10 ವರ್ಷಗಳಿಂದ ಅಧಿಕಾರ ವಂಚಿತರಾಗಿರುವ ಅಖಿಲೇಶ್ ಯಾದವ್, ಚುನಾವಣೆ ಗೆಲ್ಲಲು ಹಿಂದುತ್ವದತ್ತ ವಾಲಿರುವ ಹಿಂದೂಗಳ ಮತಗಳು ಅನಿವಾರ್ಯ ಎಂಬುದನ್ನು ಅರಿತಿದ್ದಾರೆ.
ಸನಾತನಿ ಅವತಾರದಲ್ಲಿ ಹೊಸ ರಾಜಕೀಯ ಭಾಷ್ಯ ಬರೆಯಲು ಸಜ್ಜಾಗಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ, ಇದಕ್ಕಾಗಿ ಹಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಈ ಪೈಕಿ ಅಯೋಧ್ಯೆಯ ರಾಮ ಮಂದಿರ ಭೇಟಿಯೂ ಒಂದು. ಅಷ್ಟೇ ಅಲ್ಲ, ತಮ್ಮ ಹುಟ್ಟೂರು ಸೈಫೈನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಇಟಾವಾದಲ್ಲಿ, ಬೃಹತ್ ಕೇದಾರೇಶ್ವರ ದೇವಾಲಯದ ನಿರ್ಮಾಣ ಕಾರ್ಯಕ್ಕೂ ಅಖಿಲೇಶ್ ಯಾದವ್ ಚಾಲನೆ ನೀಡಿದ್ದಾರೆ. ಅವರು ಇದಕ್ಕೂ ಮುನ್ನ ಸೈಫೈನಲ್ಲಿ 51 ಅಡಿ ಎತ್ತರದ, 60 ಟನ್ ತೂಕದ ಕಂಚು ಮತ್ತು ತಾಮ್ರದ ಶ್ರೀಕೃಷ್ಣನ ಬೃಹತ್ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರು.
ಚುನಾವಣೆ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಈಗ ಟೆಂಪಲ್ ರನ್ ಮಾಡುತ್ತಿದ್ದಾರೆ. ದೇಗುಲಗಳಿಗೆ ನಿರಂತರ ಭೇಟಿ ನೀಡುವುದು, ಭಂಡಾರಗಳಲ್ಲಿ ಪಾಲ್ಗೊಳ್ಳುವುದು ಮತ್ತು ಸನಾತನ ಸಂಪ್ರದಾಯಗಳನ್ನು ಬಹಿರಂಗವಾಗಿ ಪ್ರತಿಪಾದಿಸುವುದು ಅಖಿಲೇಶ್ ಅವರ ದಿನಚರಿಯ ಭಾಗವಾಗಿದೆ.
ಚಾಣಾಕ್ಷ ತಂತ್ರಗಾರಿಕೆ:
ಮೇಲ್ನೋಟಕ್ಕೆ ಅಖಿಲೇಶ್ ಯಾದವ್ ಅವರ ಈ ಸನಾತನ ಒಲವು, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಣೆದ ತಂತ್ರದಂತೆ ಕಾಣುತ್ತಿದೆ. ಇದರ ಹಿಂದೆ ದಶಕದ ಸೋಲುಗಳ ಆತ್ಮಾವಲೋಕನ ಮತ್ತು ಆಳವಾದ ರಾಜಕೀಯ ಲೆಕ್ಕಾಚಾರ ಅಡಗಿದೆ. 2014ರ ಲೋಕಸಭಾ ಚುನಾವಣೆಯಿಂದ ಆರಂಭವಾದ ಬಿಜೆಪಿಯ ಹಿಂದುತ್ವದ ಅಲೆ, 2017ರಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆ. ಅವರು ಸಿಎಂ ಆದ ಬಳಿಕ ಸಮಾಜವಾದಿ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್ ಛಿದ್ರವಾಗಿದೆ.
ಮುಲಾಯಂ ಸಿಂಗ್ ಯಾದವ್ ಕಾಲದಲ್ಲಿ ಪಕ್ಷಕ್ಕೆ ಅಂಟಿಕೊಂಡಿದ್ದ ‘ಅಲ್ಪಸಂಖ್ಯಾತರ ಓಲೈಕೆ’ ಎಂಬ ಹಣೆಪಟ್ಟಿಯನ್ನೇ, ಬಿಜೆಪಿ ತನ್ನ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು ಹಿಂದೂ ಮತಗಳನ್ನು ಧ್ರುವೀಕರಿಸಿತ್ತು. ಹೀಗಾಗಿ ಕಳೆದುಹೋಗಿರುವ ಹಿಂದೂ ಮತಗಳನ್ನು ಮರುಕ್ರೂಢೀಕರಿಸಲು, ಅಖಿಲೇಶ್ ಯಾದವ್ ಸನಾತನ ವೇಷ ಧರಿಸಿದ್ದಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಒಟ್ಟಾರೆಯಾಗಿ 1990ರ ದಶಕದ ರಾಜಕೀಯ ಪರಿಸ್ಥಿತಿಗೆ ‘ಮುಲ್ಲಾ ಮುಲಾಯಂ’ ಅನಿವಾರ್ಯವಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅಖಿಲೇಶ್ ಯಾದವ್ ಸನಾತನವೆಂಬ ಆಸರೆಯ ಮೊರೆ ಹೋಗಿದ್ದಾರೆ. ತಮ್ಮ ತಂದೆಯ ಪರಂಪರೆಯನ್ನು ಗೌರವಿಸುತ್ತಲೇ, ಅವರ ರಾಜಕೀಯ ನೆರಳಿನಿಂದ ಹೊರಬರುವ ಪ್ರಯತ್ನ ನಡೆಸಿದ್ದಾರೆ. ಅವರ ಈ ಪ್ರಯತ್ನ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.
