DK Shivakumar laughs heartily at Narendra Modi’s ‘separate ticket’ joke; ‘Pink’ line (Central-State) gets an auspicious start – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಡನೆ, ಗುಲಾಬಿ ಮಾರ್ಗದ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು. ಎಸ್ಜೆ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಮತ್ತು ಡಿಕೆ ಶಿವಕುಮಾರ್ ಅವರು ಟಿಕೆಟ್ ಖರೀದಿಸಿದರು. ಈ ವೇಳೆ ಪ್ರಧಾನಿ ಮೋದಿ ಅವರ ಜೋಕ್ಗೆ ಡಿಕೆ ಶಿವಕುಮಾರ್ ಮತ್ತು ಇತರರು ಜೋರಾಗಿ ನಕ್ಕ ವಿಡಿಯೋ ವೈರಲ್ ಆಗಿದೆ.
- ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.
- ಪಿಂಕ್ ಲೈನ್ ಮೆಟ್ರೋದಲ್ಲಿ ಪ್ರಧಾನಿ ಮೋದಿ ಮತ್ತು ಡಿಕೆ ಶಿವಕುಮಾರ್ ಪ್ರಯಾಣ.
- ಟಿಕೆಟ್ ಖರೀದಿ ವೇಳೆ ಪ್ರಧಾನಿ ಮೋದಿ ಹಾಸ್ಯ ಚಟಾಕಿ, ಡಿಕೆ ಶಿವಕುಮಾರ್ ಸ್ಮೈಲ್.
![]()
ಬೆಂಗಳೂರು: ರಾಜಧಾನಿಯಲ್ಲಿ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ, ನಿಲ್ದಾಣದಲ್ಲಿ ಟಿಕೆಟ್ ಖರೀದಿಸಿ ಪ್ರಯಾಣ ಮಾಡಿದ್ದಾರೆ. ಅವರೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀಸಿದರು. ರಾಜ್ಯಪಾಲರಾದ ಸುಧಾ ಯಾದವ್, ಬೆಂಗಳೂರು ನಗರಾಭಿವೃಧ್ಧಿ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಎಸ್ಜಿ ಪಾಳ್ಯ (ಸುದ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣದಲ್ಲಿ, ಪ್ರಧಾನಿ ಮೋದಿ ಮತ್ತು ಡಿಕೆ ಶಿವಕುಮಾರ್ ಅವರು ಮೆಟ್ರೋ ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸಿದ್ದು, ಈ ವೇಳೆ ಪ್ರಧಾನಿ ಮೋದಿ ಅವರ ಹಾಸ್ಯಚಟಾಕಿಗೆ, ಡಿಕೆ ಶಿವಕುಮಾರ್ ಸೇರಿದಂತೆ ಇತರರು ಜೋರಾಗಿ ನಗುತ್ತಿರುವುದು ಕಂಡುಬಂದಿತು.
ಪ್ರಧಾನಿ ಮೋದಿ ಟಿಕೆಟ್ ಖರೀದಿಸಿದ ಬಳಿಕ, ಡಿಕೆ ಶಿವಕುಮಾರ್ ಅವರು ಟಿಕೆಟ್ ಖರೀದಿಗೆ ಮುಂದಾದರು. ಈ ವೇಳೆ ಪ್ರಧಾನಿ ಮೋದಿ ಮೆಲ್ಲಗಿನ ಧ್ವನಿಯಲ್ಲಿ ಟಿಕೆಟ್ ಹಣದ ಕುರಿತು ಜೋಕ್ ಮಾಡಿದರು. ಇದಕ್ಕೆ ಸಿಎಂ ಮತ್ತು ಸಚಿವ ಕೃಷ್ಣಬೈರೇಗೌಡ ಜೋರಾಗಿ ನಕ್ಕರು. ಸಂಸದ ತೇಜಸ್ವಿ ಸೂರ್ಯ ಕೂಡ ಮುಗುಳ್ನಗುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಪ್ರಧಾನಿಗೆ ಅದ್ದೂರಿ ಸ್ವಾಗತ:
ಗುಲಾಬಿ ಮಾರ್ಗದ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಲು ಸುದ್ದಗುಂಟೆ ಪಾಳ್ಯ ಮೆಟ್ರೋ ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದ ಅವರಿಗೆ, ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಸಾವಿರಾರು ಜನರು ಅದ್ದೂರಿ ಸ್ವಾಗತ ಕೋರಿದರು. ಈ ವೇಳೆ ಪ್ರಧಾನಿ ಮೋದಿ ಕೂಡ ಜನರತ್ತ ಕೈಬೀಸಿದರು. ಬಳಿಕ ಡಿಕೆ ಶಿವಕುಮಾರ್ ಅವರೊಡನೆ ಹೊಸ ರೈಲಿಗೆ ಹಸಿರು ನಿಶಾನೆ ತೋರಿದರು.
ಗುಲಾಬಿ ಮಾರ್ಗ ಉದ್ಘಾಟನೆ ಬಳಿಕ ಐಐಎಂಬಿ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿ ಅವರಿಗೆ ನಾಡಪ್ರಭು ಕೆಂಪೇಗೌಡ ಅವರ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರು. ಇದಕ್ಕೂ ಮೊದಲು ಜಿಗಣಿ ಬಳಿಯಿರುವ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಯೋಗಕ್ಕೆ ಡಾ. ರಾಜಕುಮಾರ್ ಕೊಡುಗೆ ಸ್ಮರಿಸಿದರು.
“ಕರ್ನಾಟಕವು ಯೋಗದ ಪ್ರಮುಖ ಕೇಂದ್ರವಾಗಿದೆ. ಕನ್ನಡದ ಮಹಾನ್ ಕಲಾವಿದ ಡಾ. ರಾಜಕುಮಾರ್ ಅವರು ತಮ್ಮ ಕಲಾಸೇವೆ ಜೊತೆಗೆ ಯೋಗಕ್ಕೂ ಸ್ಮರಣೀಯ ಕೊಡುಗೆ ನೀಡಿದ್ದಾರೆ” ಎಂದು ಪ್ರಧಾನಿ ಮೋದಿ ನುಡಿದರು.
