Anchor Radha Hiregoudar New Era start: ತುಂಬಾ ಜನಕ್ಕೆ ಉತ್ತರ ಕೊಡೋದಿದೆ- ಇಷ್ಟೊಂದು ಗಟ್ಟಿಯಾಗಿ, ಘೋಷಿಸಬೇಕಾದರೆ ಆ ವ್ಯಕ್ತಿಯೊಳಗೆ ಸಿಂಹದಂಥಾ ತಾಕತ್ತು ಇರಬೇಕು. ಚಿರತೆಯಂತ ವೇಗ ಇರಬೇಕು. ವ್ಯಾಘ್ರದಂತಾ ಘರ್ಜನೆ ಇರಬೇಕು.. ರಾಧಾ ಹಿರೇಗೌಡರ್ ಮಾತಿನಲ್ಲಿ ಅದೆಲ್ಲವೂ ಇದೆ. ಎರಡು ದಶಕಕ್ಕೂ ಹೆಚ್ಚು ಕಾಲ ಕನ್ನಡ ಮಾಧ್ಯಮವನ್ನು ಆಳಿದ್ದ ರಾಧಾ ಹಿರೇಗೌಡರ್ ನೇಪಥ್ಯಕ್ಕೆ ಸರಿಯುತ್ತಿದ್ದಾರೆ ಅನ್ನುವ ಮಾತುಗಳ ಮಧ್ಯೆ ಫೀನಿಕ್ಸ್ನಂತೆ ಎದ್ದು ಬಂದಿದ್ದಾರೆ. ಲೆಫ್ಟು ಅಲ್ಲ.. ರೈಟೂ ಅಲ್ಲ.. ಮಧ್ಯದಲ್ಲೂ ನುಣಿಚಿಕೊಳ್ಳದೆ, ಸತ್ಯ, ನ್ಯಾಯಕ್ಕಾಗಿ ಹೋರಾಡುವ ಛಾತಿಯುಳ್ಳ ರಾಧಾ ಹಿರೇಗೌಡರ್ ಈಗ ಸ್ಪೀಡ್ ನ್ಯೂಸ್ ಸಾರಥ್ಯ ವಹಿಸಿಕೊಂಡಿದ್ದಾರೆ.
ರಾಧಾ ಹಿರೇಗೌಡರ್ ಕೇವಲ ಸ್ಪೀಡ್ ನ್ಯೂಸ್ ಕನ್ನಡ ವಾಹಿನಿಯ ಸಾರಥ್ಯ ವಹಿಸಿಕೊಳ್ಳುತ್ತಿಲ್ಲ. ಬದಲಾಗಿ ಕನ್ನಡ ಸುದ್ದಿವಾಹಿನಿಗಳ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆಯುತ್ತಿದ್ದಾರೆ. ಮಹಿಳಾ ಪತ್ರಕರ್ತೆಯೊಬ್ಬರು ಮೊಟ್ಟಮೊದಲ ಬಾರಿಗೆ ಕನ್ನಡ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರ ಸ್ಥಾನವನ್ನು ವಹಿಸಿಕೊಳ್ತಿದ್ದಾರೆ. ಸ್ಪೀಡ್ ನ್ಯೂಸ್ ಕನ್ನಡ ವಾಹಿನಿಯ ಪಾಲುದಾರರಾಗಿ, ಚಾನೆಲ್ಗೆ ಕಾಲಿಟ್ಟಿರೋ ರಾಧಾ ಹಿರೇಗೌಡರ್ ಪ್ರಧಾನ ಸಂಪಾಕರಾಗಿಯೂ ಆಡಳಿತದ ಜೊತೆಗೆ ಸಂಪಾದಕೀಯ ವಿಭಾಗದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.
ಯಾರು ಗೊತ್ತಾ ರಾಧಾ ಹಿರೇಗೌಡರ್?
ಕನ್ನಡದ ಕುಲಕೋಟಿಯಿಂದ ರಾಧಕ್ಕ ಎಂದೇ ಕರೆಸಿಕೊಳ್ತಿರೋ ರಾಧಾ ಹಿರೇಗೌಡರ್, ನಿಮಗೆ ತೆರೆಯ ಮೇಲೆ ಆರ್ಭಟಿಸೋ ಮಾತಿನ ಮಲ್ಲಿ, ಎದುರಾಳಿಗಳ ಸಿಂಹಸ್ವಪ್ನ ಎಂದಷ್ಟೇ ಗೊತ್ತು. ಉತ್ತರ ಕನ್ನಡ ಜಿಲ್ಲೆಯ ಆಗಿನ ಕುಗ್ರಾಮ ದಾಂಡೇಲಿ- ಗಣೇಶಗುಡಿಯಲ್ಲಿ ಬೆಳೆದ ರಾಧಾ ಹಿರೇಗೌಡರ್, ಕಾರವಾರದ ಕರಾವಳಿ ಮುಂಜಾವು ಪತ್ರಿಕೆಯಲ್ಲಿ ತಮ್ಮ ಪತ್ರಿಕೋದ್ಯಮ ಬದುಕು ಆರಂಭಿಸಿದ್ದರು. ಅಲ್ಲಿಂದ ಆಕಾಶವಾಣಿಯಲ್ಲಿ ಸುದ್ದಿವಾಚಕಿಯಾಗಿ ಸೇರಿಕೊಂಡರು. ಬಳಿಕ ಬೆಂಗಳೂರಿಗೆ ಬಂದು ಉದಯಟಿವಿಯಲ್ಲಿ ಸುದ್ದಿ ನಿರೂಪಕಿಯಾಗಿ ರಾಜ್ಯ ಮಟ್ಟದ ಪತ್ರಿಕೋದ್ಯಮಕ್ಕೆ ಎಂಟ್ರಿಯಾದರು. ಬಳಿಕ ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ಬಿಟಿವಿಯಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ರಾಧಾ ಹಿರೇಗೌಡರ್, ಕರ್ನಾಟಕದ ಅಪರೂಪದ ಪತ್ರಕರ್ತರಲ್ಲಿ ಒಬ್ಬರಾಗಿ ನೆಲೆಯೂರಿದರು. ವರ್ಷದ ಹಿಂದೆ ಗ್ಯಾರೆಂಟಿ ನ್ಯೂಸ್ ನಿರ್ದೇಶಕರಾಗಿಯೂ ಹೊಸ ಚಾನೆಲ್ ಆರಂಭಿಸಿದ್ದರು.
ಬಾಲ್ಯದ ಕಷ್ಟ, ಸಮಾಜದ ಸುಖ ದು:ಖ, ಕಾಳಿ ನದಿಯಲ್ಲಿ ಮುಳುಗಿದ ಬದುಕುಗಳ ಚಿತ್ರಣವನ್ನು ಕಾಣುತ್ತಲೇ ಬೆಳೆದ ರಾಧಾ ಹಿರೇಗೌಡರ್ ಅವರಲ್ಲಿ ಹೋರಾಟದ ಕಿಚ್ಚು ಸಹಜವಾಗಿಯೇ ರಕ್ತಗತವಾಗಿತ್ತು. ರಾಧಕ್ಕನೊಳಗಿರೋ ಹೋರಾಟಗಾರ್ತಿ, ಟಿವಿ ಪರದೆಯ ಮೇಲೆ ಆರ್ಭಟಿಸಿದ್ರಲ್ಲಿ ಅಚ್ಚರಿಯೇನೂ ಇರಲಿಲ್ಲ. ತುಂಬಾ ಜನಮಾನಸದಲ್ಲಿ ಉಳಿದುಕೊಳ್ಳುವ ಮ್ಯಾನರಿಸಂ ಹೊಂದಿದ್ದ ಅತ್ಯುತ್ತಮ ವಾಗ್ಮಿ, ದಿಟ್ಟ ಹೋರಾಟಗಾರ್ತಿಯರ ಸಾಲಿನಲ್ಲಿ ಮುಂಚೂಣಿಗೆ ಬಂದ ರಾಧಕ್ಕ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡವರು. ರಾಧಕ್ಕ ಸಂದರ್ಶನಕ್ಕೆ ಬರುತ್ತಾರೆ ಎಂದರೆ, ಅದು ಬೆಂಕಿ ಬಿರುಗಾಳಿ ಬಂದಂತೆ.
ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಅವರ ಪ್ರತಿಭೆಗೆ ಯಾರೂ ಸಾಟಿ ಇಲ್ಲ. ಅವರದೇ ಶೈಲಿಯಲ್ಲಿ ನಿರೂಪಣೆಯಿಂದ ಜನಮಾನಸದಲ್ಲಿ ರಾಧಾ ಹಿರೇಗೌಡರ್ ಅಚ್ಚಳಿಯದೇ ಉಳಿದಿದ್ದಾರೆ. ಹಲವು ಸುದ್ದಿವಾಹಿನಿಗಳಲ್ಲಿ ಕೆಲಸ ನಿರ್ವಹಿಸಿ ಈಗ ಅವರು ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಇದ್ದದ್ದು ಇದ್ದಂತೆ ನಿರರ್ಗಗಳವಾಗಿ ಮಾತನಾಡುವ ಚತುರತೆ, ಯಾವುದಕ್ಕೂ ಹೆದರದೆ ವಿಚಾರ ಮಂಡಿಸುವ ಚಾತುರ್ಯ ಹೊಂದಿರುವ ರಾಧಾ ಹಿರೇಗೌಡರ್, ಕೆಲ ದಿನಗಳಿಂದ ಟಿವಿ ಪರದೆಯಿಂದ ನಾಪತ್ತೆಯಾದದ್ದು ಅಭಿಮಾನಿಗಳ ಕಳವಳಕ್ಕೆ ಕಾರಣವಾಗಿತ್ತು. ಆದರೆ ರಾಧಕ್ಕ ಮುಂದೇನು ಅಂತ ಕೇಳೋಣವೆಂದರೆ, ಅವರು ಯಾರ ಕೈಗೂ ಸಿಗದೆ, ತಮ್ಮದೇ ಚಿಂತನೆ ಗುಹೆಯೊಳಗೆ ಸೇರಿಕೊಂಡಿದ್ದರು.
ಸಿಂಹ ಸುಮ್ಮನಿದೆ ಅಂದ್ರೆ ಅದು ಸೋತಿದೆ ಅಂತಾ ಅಲ್ಲ… ಮುಂದೆ ಹೇಗೆ ಹೆಜ್ಜೆ ಇಡೋದು ಎಂದು ಯೋಚಿಸುತ್ತಲೇ ಇರುತ್ತೆ. ಅದೇ ರೀತಿ ರಾಧಾ ಹಿರೇಗೌಡರ್ ಅವರು ಸುದ್ದಿವಾಹಿನಿಯಿಂದ ದೂರ ಸರಿದರೂ ತೆರೆಮರೆಯಲ್ಲಿ ಯೋಜನೆ ರೂಪಿಸುತ್ತಿದ್ದರು. ರಾಧಾ ಹಿರೇಗೌಡರ್ ಅವರಿಗೆ ಅವರದೇ ಆದ ಫ್ಯಾನ್ಸ್ ಫಾಲೋಯರ್ಸ್ ಇದ್ದಾರೆ. ಅವರ
ನಡೆಯ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದವರಿಗೆ ರಾಧಾ ಹಿರೇಗೌಡರ್ ಇಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ರಾಧಾ ಹಿರೇಗೌಡರ್ ಅವರು ಇಂದಿನಿಂದ ಸ್ಪೀಡ್ ನ್ಯೂಸ್ ನ ಸಾರಥ್ಯ ವಹಿಸಿಕೊಂಡಿದ್ದಾರೆ.
ರಾಧಾ ಹಿರೇಗೌಡರ್ ಯಾವುದೇ ಚಾನೆಲ್ಗೆ ಹೋಗಲಿ, ಅಲ್ಲಿ ಅವರ ಖದರ್, ವೈಬ್, ವೈಭವ, ಸದ್ದು, ಗದ್ದಲ, ಅಬ್ಬರ ಇದ್ದೇ ಇರುತ್ತೆ. ಪತ್ರಿಕೋದ್ಯಮ ಹಾಗೂ ಪತ್ರಕರ್ತರು ಚಲನಶೀಲರಾಗಿರಬೇಕು. ಎಷ್ಟು ದಿನ ಬೇರೆಯವರ ಜೊತೆ ಕೆಲಸ ಮಾಡೋದು. ತಮ್ಮದೇ ಸ್ವಂತದ್ದೊಂದು ಮಾಡೋಣ ಎಂದುಕೊಳ್ಳುತ್ತಿರುವಾಗಲೇ ಸ್ಪೀಡ್ ನ್ಯೂಸ್ಗೆ ಪಾಲುದಾರರಾಗಿ ಸೇರಿಕೊಂಡಿದ್ದಾರೆ. ಸ್ಪೀಡ್ ನ್ಯೂಸ್ ಸಂಸ್ಥಾಪಕ ವಿ ವಿರೇಶ್ ಜೊತೆ ಪಾಲದಾರರಾಗಿ, ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಇಂದಿನಿಂದಲೇ ಅಧಿಕಾರ ಸ್ವೀಕರಿಸಿದ್ದಾರೆ.
ಕನ್ನಡದ ಅತ್ಯುತ್ತಮ ಟೀಂ ಜೊತೆ ಅವರು ಸ್ಪೀಡ್ ನ್ಯೂಸ್ ಮುನ್ನಡೆಸಲಿದ್ದಾರೆ. ಅತಿ ಶೀಘ್ರದಲ್ಲಿಯೇ ಸ್ಪೀಡ್ ನ್ಯೂಸ್ ಕನ್ನಡ ಸ್ಯಾಟಲೈಟ್ ವಾಹಿನಿಯಾಗಿ ಜನ ಸೇವೆಗೆ ಮತ್ತಷ್ಟು ವೇಗ ನೀಡಲಿದೆ. ಕಳೆದ 9 ವರ್ಷಗಳಿಂದ ವೀರೇಶ್ ಅವರ ಮಾಲೀಕತ್ವದ ಸ್ಪೀಡ್ ನ್ಯೂಸ್ ಚಾನೆಲ್ ಯಾವ ಚಾನೆಲ್ಗಳಿಗೂ ಕಮ್ಮಿ ಇಲ್ಲವೆಂಬಂತೆ ದೊಡ್ಡಮಟ್ಟದಲ್ಲೇ ಗುರುತಿಸಿಕೊಂಡು ಬಂದಿದೆ. ಸ್ಪೀಡ್ ನ್ಯೂಸ್ ಚಾನೆಲ್ನಲ್ಲಿ ಯಾವುದೇ ಸುದ್ದಿಗಳು ನಿರ್ಭೀತವಾಗಿ ಪ್ರಸಾರವಾಗುತ್ತವೆ. ಅಂತದ್ದೊಂದು ವಿಶ್ವಾಸಾರ್ಹತೆ ಉಳಿಸಿಕೊಂಡ ಬಂದಿದೆ ವಿ.ವೀರೇಶ್ ಮಾಲೀಕತ್ವದ ಸ್ಪೀಡ್ ನ್ಯೂಸ್ ಚಾನೆಲ್. ಪ್ರಸ್ತುತ ರಾಜರಾಜೇಶ್ವರಿ ನಗರದಲ್ಲಿರುವ ಪ್ರಧಾನ ಕಚೇರಿ ಮಾತ್ರ ಅದ್ಭುತವಾಗಿದೆ. ಏಕೆಂದರೆ ಯಾವ ಸ್ಯಾಟಲೈಟ್ ಚಾನೆಲ್ಗೂ ಕಮ್ಮಿ ಇಲ್ಲವೆಂಬಂತೆ ಎಲ್ಲಾ ರೀತಿಯ ಸೌಲಭ್ಯಗಳು ಸ್ಪೀಡ್ ನ್ಯೂಸ್ನಲ್ಲಿದೆ. ಮುಖ್ಯದ್ವಾರದಿಂದಲೇ ನೋಡುಗರನ್ನು ಸೆಳೆಯುತ್ತದೆ. ದೊಡ್ಡ ದೊಡ್ಡ 2 ಸ್ಟುಡಿಯೋಗಳು, 4 ರೀತಿಯಲ್ಲಿ ಶೂಟ್ ಮಾಡಬಲ್ಲ ಪಾಡ್ಕಾಸ್ಟ್ ಸ್ಟುಡಿಯೋ, ಪಿಸಿಆರ್, ಗೆಸ್ಟ್ ಲಾಂಜ್, ವಿಶಾಲವಾದ ಮೀಟಿಂಗ್ ಹಾಲ್, ಡ್ರೆಸ್ಸಿಂಗ್ ಅಂಡ್ ಮೇಕಪ್ ರೂಂ ಎಲ್ಲವೂ ಹೈಟೆಕ್ ಆಗಿ ರೂಪಿತಗೊಂಡಿವೆ.
ಹೊಚ್ಚ ಹೊಸ ಇನ್ನೆರಡು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರೋ ಸ್ಟುಡಿಯೋಗಳೂ ರೆಡಿಯಾಗಲಿವೆ. ಕನ್ನಡದಲ್ಲಿ 4 ಸ್ಟುಡಿಯೋಹೊಂದಿರುವ ಚೊಚ್ಚಲ ಚಾನೆಲ್ ಎಂಬ ಹಿರಿಮೆಗೆ ಸ್ಪೀಡ್ ನ್ಯೂಸ್ ಪಾತ್ರವಾಗಲಿದೆ.

ಡಾ. ಹೀಲ್ ಪೇನ್ ಕ್ಯೂರ್ ಹಾಸ್ಪಿಟಲ್ನ ಡಾ. ರಾಕೇಶ್ ಹೆಚ್. ಜಯಪ್ರಕಾಶ್ ಅವರು ಸ್ಪೀಡ್ ನ್ಯೂಸ್ ಜೊತೆ ನಿರ್ದೇಶಕರಾಗಿ ಕೈ ಜೋಡಿಸಿದ್ದು, ಅವರೂ ರಾಧಾ ಹಿರೇಗೌಡರ್ಗೆ ಶುಭ ಹಾರೈಸಿದ್ದಾರೆ. ರಾಧಾ ಹಿರೇಗೌಡರ್ ಅವರ ಮುಂದಾಳತ್ವದಲ್ಲಿ ಸ್ಪೀಡ್ ನ್ಯೂಸ್ ಕನ್ನಡ ಪತ್ರಿಕೋದ್ಯಮದಲ್ಲೇ ವಿಭಿನ್ನ ಹಾಗೂ ಹೊಸ ಮೈಲಿಗಲ್ಲು ಸೃಷ್ಟಿಸುವ ವಿಶ್ವಾಸವನ್ನು ವೀರೇಶ್ ಅವರು ಹೊಂದಿದ್ದಾರೆ. ಜನತಾ ವಾಹಿನಿಯ ಮ್ಯಾನೇಜಿಂಗ್ ಡೈರೆಕ್ಟರ್ ಗೋವರ್ಧ
ನ್ ರೆಡ್ಡಿ ಹಾಗೂ ಪ್ರಧಾನ ಸಂಪಾದಕ ಪ್ರೀತಂ ಕೆಮ್ಮಾಯಿ ಅವರು ಸ್ಪೀಡ್ ನ್ಯೂಸ್ ಸಂಸ್ಥಾಪಕ ವೀರೇಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ರಾಧಾ ಹಿರೇಗೌಡರ್ ತಂಡಕ್ಕೆ ಶುಭ ಹಾರೈಸಿದರು.
