ಹಾಲಿನ ವಾಹನ ಮತ್ತು ಬೈಕ್ ಡಿಕ್ಕಿ : ಸ್ಥಳದಲ್ಲಿಯೇ 2 ವಿದ್ಯಾರ್ಥಿಗಳ ಸಾವು !

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ನಂದಿನಿ ಹಾಲಿನ ವಾಹನ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಬುಧವಾರ ಮುಂಜಾನೆ ಶಿವಮೊಗ್ಗ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ಬಳಿ ಹಾಲಿನ ವಾಹನ- ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ನಂದಿನಿ ಹಾಲಿನ ವಾಹನ ಮತ್ತು ಬೈಕ್ ಡಿಕ್ಕಿಯಾಗಿ ಆದಿತ್ಯ ಮತ್ತು ಸಂದೀಪ್ ಕೆಳಗೆ ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾರೆ. ರಕ್ತದ ಮಡುವಿನಲ್ಲಿ ಒಬ್ಬರ ಮೇಲೊಬ್ಬರು ರಸ್ತೆ ಮೇಲೆ ಬಿದ್ದಿರುವ ದೃಶ್ಯ ಘೋರವಾಗಿತ್ತು. ವಿದ್ಯಾರ್ಥಿಗಳಿಬ್ಬರೂ ಬೆಳಗಿನ ಜಾವ ಬೈಕ್ಗೆ ಸಮೀಪದ ಭಾರ್ಗವಿ ಬಂಕ್ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಕಾಲೇಜಿನ ಹಾಸ್ಟೆಲ್ಗೆ ಮರಳುವಾಗ ಎದುರಿಗೆ ಬಂದ ಹಾಲಿನ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
