ಮಂಡ್ಯ: ರಾಜ್ಯದೆಲ್ಲೆಡೆ ಸಂಭ್ರಮದಿಂದ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ. ಈ ಸಂಭ್ರಮದ ವೇಳೆ ಕೆಲ ದುರಂತಗಳು ಸಂಭವಿಸಿವೆ. ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇತ್ತ ಮೈಸೂರಿನಲ್ಲಿ ಗಣಪನಿಗೆ ಪೂಜೆ ಸಲ್ಲಿಸಲು ಹೋಗಿ ಟ್ರ್ಯಾಕ್ಟರ್ನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ.ಐದು ದಿನದಿಂದ ಗಣಪನಿಗೆ ಪೂಜೆ ಪುನಸ್ಕಾರ ಮಾಡಿದವರು, ನಿನ್ನೆ ಸಂಭ್ರಮದಿಂದ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದರು. ಈ ಸಂಭ್ರಮದ ವೇಳೆ ಕೆಲ ಕಹಿ ಘಟನೆಗಳು ಸಂಭವಿಸಿವೆ. ರಾಜ್ಯದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಎರಡು ಪ್ರತ್ಯೇಕ ಘಟನೆಗಳು ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದಿವೆ.ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರ ಗ್ರಾಮದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮಂಜುನಾಥ್ ಮೃತ ವ್ಯಕ್ತಿ. ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಘಟನೆ ನಡೆದಿದೆ.ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ
ಯುವಕರ ಜೊತೆ ಡಿಜೆ ಹಾಡಿಗೆ ಮಂಜುನಾಥ್ ಭರ್ಜರಿ ಹೆಜ್ಜೆ ಹಾಕುತ್ತಿದ್ದರು. ಆದರೆ ಹಠಾತ್ ಹೃದಯಾಘಾತದಿಂದ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಜುನಾಥ್ ಅವರ ಕೊನೆಯ ಕ್ಷಣದ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಆಗಿದೆ.ಇದೇ ರೀತಿಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಕೂಡ ನಿನ್ನೆ ರಾತ್ರಿ ಘಟನೆ ನಡೆದಿದೆ. ಗಣೇಶ ವಿಸರ್ಜನೆ ವೇಳೆ ನಾಗವಲ್ಲಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ವ್ಯಕ್ತಿಗೆ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ. ಲಕ್ಷ್ಮಿಪತಿ (40) ಮೃತ ವ್ಯಕ್ತಿ.ಗಣೇಶ ವಿಸರ್ಜನೆ ಹಿನ್ನಲೆ ಗ್ರಾಮಸ್ಥರು ಡ್ಯಾನ್ಸ್ ಮಾಡುತ್ತಿದ್ದರು. ಲಕ್ಷ್ಮಿಪತಿ ಕೂಡ ಡ್ಯಾನ್ಸ್ ಮಾಡುತ್ತಿದ್ದು, ಹಠಾತ್ ಹೃದಯಾಘಾತ ಸಂಭವಿಸಿದ್ದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಲಕ್ಷ್ಮಿಪತಿ ಗ್ರಾಮದಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗಣೇಶ ಮೆರವಣಿಗೆ ವೇಳೆ ಟ್ರ್ಯಾಕ್ಟರ್ನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ. ಆಟೋ ರಾಜು(34) ಮೃತ ವ್ಯಕ್ತಿ. ಗ್ರಾಮದಲ್ಲಿ ಗಣಪತಿ ವಿಸರ್ಜನೆಗಾಗಿ ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಇತ್ತ ಮನೆ ಬಳಿ ಬಂದ ಗಣಪನಿಗೆ ಪೂಜೆ ಸಲ್ಲಿಸಲು ರಾಜು ಟ್ರ್ಯಾಕ್ಟರ್ ಹತ್ತಿದ್ದ. ಪೂಜೆ ಸಲ್ಲಿಸುತ್ತಾ ಏಕಾಏಕಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ರಾಜುನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
