
ದೆಹಲಿ : ಸುಪ್ರೀಂಕೋರ್ಟ್ನ 53ನೇ ಮುಖ್ಯನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಅವರು ನೇಮಕಗೊಂಡಿದ್ದಾರೆ. ಕೇಂದ್ರ ಕಾನೂನು ಸಚಿವಾಲಯದ ಅಡಿಯಲ್ಲಿರುವ ನ್ಯಾಯಾಂಗ ಇಲಾಖೆ ಹೊರಡಿಸಿದ ಅಧಿಸೂಚನೆಯ ಅನ್ವಯ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಈಗಿರುವ CJI ಭೂಷಣ್ ಆರ್ ಗವಾಯಿ ಅವರು ನವೆಂಬರ್ 23ರಂದು ನಿವೃತ್ತಿ ಹೊಂದಲಿದ್ದು, ನ್ಯಾ.ಸೂರ್ಯಕಾಂತ್ ಅವರು ನವೆಂಬರ್ 24ರಂದು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಹಾಗೇ, ಇವರು ಹರ್ಯಾಣ ಮೂಲದ ಮೊದಲ ಸಿಜೆಐ ಆಗಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಅವರು ನೇಮಕಗೊಂಡ ಬಗ್ಗೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಈ ಬಗ್ಗೆ ಟ್ವೀಟ್ ಮಾಡಿ “ಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ರಾಷ್ಟ್ರಪತಿಗಳು ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರನ್ನು ನವೆಂಬರ್ 24, 2025 ರಿಂದ ಜಾರಿಗೆ ಬರುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿ, ಆದೇಶ ಹೊರಡಿಸಿದ್ದಾರೆʼ ಎಂದು ಹೇಳಿದ್ದಾರೆ. ಹಾಗೇ, ಭಾರತದ ಹೊಸ ಮುಖ್ಯ ನ್ಯಾಯಮೂರ್ತಿಗಳಿಗೆ ತಮ್ಮ “ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳುʼ ಎಂದು ತಿಳಿಸಿದ್ದಾರೆ.
