ಬೆಂಗಳೂರು: ಮಹಿಳಾ ಪ್ರಧಾನ ಚಿತ್ರಗಳಿಗೂ, ಮಹಿಳಾ ಪರ ಚಿತ್ರಗಳಿಗೂ ವ್ಯತ್ಯಾಸವಿದೆ. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಮಹಿಳಾ ಪರ ಚಿತ್ರಗಳಿಗಿಂತ, ಮಹಿಳಾ ಪ್ರಧಾನ ಚಿತ್ರಗಳಾಗಿದ್ದವು ಎಂದು ಲೇಖಕಿ ಮತ್ತು ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಸಿದ್ಧಲಿಂಗಯ್ಯ ನಿರ್ದೇಶನದ ʼಹೇಮಾವತಿʼ ಚಿತ್ರದ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ʼಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಮಹಿಳಾ ಪ್ರಧಾನ ಚಿತ್ರಗಳಾಗಿದ್ದವೇ ಹೊರತು, ಮಹಿಳಾ ಪರ ಚಿತ್ರಗಳಾಗಿರಲಿಲ್ಲ. ಅವರ ಚಿತ್ರಗಳಲ್ಲಿ ಮಹಿಳಾ ಪಾತ್ರಗಳು ಗಂಡು ಬಯಸುವ ಪಾತ್ರಗಳಾಗಿದ್ದವು. ಚಿತ್ರದ ನಾಯಕಿಯು ʼಈ ಶತಮಾನದ ಮಾದರಿ ಹೆಣ್ಣುʼ ಎಂದು ಹಾಡುತ್ತಾ, ಹಾಡಿನ ಕೊನೆಯಲ್ಲಿ ತನ್ನ ಪರ್ಸ್ ಕಳೆದುಕೊಳ್ಳುತ್ತಾಳೆ. ಅದನ್ನು ಹುಡುಕಿಕೊಂಡು ತರುವುದು ಗಂಡಸರು. ಪುಟ್ಟಣ್ಣನವರು ತಮ್ಮ ಎಲ್ಲಾ ಚಿತ್ರಗಳಲ್ಲಿ ಮಹಿಳೆ ಸನಾತನ ಸಂಸ್ಕೃತಿ ಹೇಳಿದ ರೀತಿ ಇದ್ದರೆ, ಜಯ ಎಂದು ಪ್ರತಿಪಾದಿಸಿದ್ದಾರೆ. ಹಾಗಾಗಿ, ಮಹಿಳಾ ಪ್ರಧಾನ ಚಿತ್ರಗಳೆಲ್ಲಾ ಮಹಿಳಾ ಪರ ಚಿತ್ರಗಳಾಗಿರುವುದಿಲ್ಲʼ ಎಂದು ಪ್ರತಿಪಾದಿಸಿದರು.
ಈ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಚ.ಹ. ರಘುನಾಥ, ʼಸಿದ್ಧಲಿಂಗಯ್ಯನವರ ಚಿತ್ರಗಳಲ್ಲೇ ವಿಭಿನ್ನವಾದ ಚಿತ್ರವೆಂದರೆ ಅದು ʼಹೇಮಾವತಿʼ. ಈ ಚಿತ್ರ ಮಾಡುವ ಮೊದಲು ಅವರು ಅಷ್ಟರಲ್ಲಾಗಲೇ ʼಬಂಗಾರದ ಮನುಷ್ಯʼ ಮತ್ತು ʼಭೂತಯ್ಯನ ಮಗ ಅಯ್ಯುʼ ಎಂಬ ಎರಡು ಕಲಾಕೃತಿಗಳನ್ನು ನೀಡಿದ್ದರು. ಆ ಚಿತ್ರಗಳ ನಂತರ ʼಹೇಮಾವತಿʼ ಮೂಲಕ ಹೊಸ ಸಾಹಸ ಮಾಡುವುದರ ಜೊತೆಗೆ ಹೊಸ ಸವಾಲು ಸ್ವೀಕರಿಸಿದರು.
ಈ ಚಿತ್ರದಲ್ಲಿ ರಾಮಾಯಣವನ್ನು ಅವರು ನೇರವಾಗಿ ತರದಿದ್ದರೂ, ಅದರ ಛಾಯೆ ಇತ್ತು. ಇದು ಯಾವುದೋ ಒಂದು ಊರಿನ ಕಥೆಯಾಗದೆ, ದೇಶದ ಯಾವುದೇ ಮೂಲೆಗೆ ಬೇಕಾದರೂ ಸಲ್ಲುವಂತಹ ಕಥೆಯಾಗಿತ್ತು. ಚಿತ್ರದ ಕಥೆ ಸ್ವಾತಂತ್ರ್ಯಪೂರ್ವದ್ದಾಗಿದ್ದರೂ, ಈಗಲೂ ಸಲ್ಲುವಂತಿದೆ. ರಾಮಾಯಣದಲ್ಲಿ ಸೀತೆ ಅಗ್ನಿಪರೀಕ್ಷೆ ಎದುರಿಸಿದರೆ, ಇಲ್ಲಿ ಹೇಮಾವತಿ ಮತ್ತು ಚೆನ್ನಿ ಎಂಬ ಎರಡು ಪಾತ್ರಗಳು ಬೇರೆಬೇರೆಯದೇ ರೀತಿಯಲ್ಲಿ ಅಗ್ನಿದಿವ್ಯಕ್ಕೆ ಒಳಗಾಗುತ್ತಾರೆ. ಈ ಚಿತ್ರ ಈಗ ತಯಾರಾಗಿದ್ದರೆ ಬಿಡುಗಡೆ ಕಷ್ಟವಾಗಿರುತ್ತಿತ್ತು. ಸಿದ್ಧಲಿಂಗಯ್ಯನವರು ಇನ್ನೊಂದು ಸಿನಿಮಾ ಮಾಡುವುದು ಕಷ್ಟವಾಗಿರುತ್ತಿತ್ತು. ಸೆನ್ಸಾರ್ ಸೇರಿದಂತೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿತ್ತುʼ ಎಂದು ಹೇಳಿದರು.
ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಹೆಣ್ಣೆಂದರೆ ಬರೀ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಲೇಖಕಿಯರ ಸಂಘದ ಅಧ್ಯಕ್ಷರಾದ ಸುನಂದಮ್ಮ ಮಾತನಾಡಿ, ʼಮಹಿಳೆಗೆ ಅದೆಷ್ಟೇ ಪ್ರತಿಭೆ, ಶಿಕ್ಷಣ, ಕ್ರಿಯೇಟಿವಿಟಿ ಇದ್ದರೂ ಮುಖ್ಯವಲ್ಲ, ಆಕೆ ಸೌಂದರ್ಯಕ್ಕೆ ಮಾತ್ರ ಸೀಮಿತ ಎನ್ನುವಂತಹ ಪರಿಸ್ಥಿತಿ ಇತ್ತು. ಈಗ ಪರಿಸ್ಥಿತಿ ಸ್ವಲ್ಪ ಬದಲಾಗುತ್ತಿದೆʼ ಎಂದರು.
ಪತ್ರಕರ್ತೆ ಮಾನಸಾ ಚಂದ್ರಿಕಾ ಮಾತನಾಡಿ, ʼಕಿರುತೆರೆಯಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಧಾರಾವಾಹಿಗಳು ಬರುತ್ತಿವೆ. ಆದರೆ, ಈ ಧಾರಾವಾಹಿಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದೇ ಹೆಣ್ಣು. ಶೋಷಣೆ ವಿರುದ್ಧ ಧ್ವನಿ ಎತ್ತಿದರೆ ಅವರನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ. ಗಂಡಸರ ಎದುರು ನಿಂತು ಮಾತಾಡಿದರೆ, ಅವರಿಗೆ ಗಂಡುಬೀರಿ ಎಂಬ ಹಣೆಪಟ್ಟಿ ಬೀಳುತ್ತದೆ. ಆಕೆ ಮೊದಲು ತನ್ನ ಕುಟುಂಬವನ್ನು ಜಯಿಸಬೇಕು, ನಂತರ ಸಮಾಜವನ್ನು ಜಯಸಿಬೇಕುʼ ಎಂದರು.
