ಬೆಂಗಳೂರು: ಗುಜರಾತ್ನ ವಡೋದರಾದಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಮಹಿಳಾ ತಂಡವು ಇತಿಹಾಸ ನಿರ್ಮಿಸಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಸ್ಮೃತಿ ಮಂಧಾನ ಅವರ ನಿರ್ಧಾರ ಆರಂಭದಲ್ಲಿ ಕಠಿಣ ಎನಿಸಿದರೂ, ಅಂತಿಮವಾಗಿ ತಂಡಕ್ಕೆ ಜಯ ತಂದುಕೊಟ್ಟಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಜೆಮಿಮಾ ರೋಡ್ರಿಗಸ್ (57) ಮತ್ತು ಲಾರಾ ವೊಲ್ವಾರ್ಡ್ಟ್ (44) ಅವರ ಸ್ಫೋಟಕ ಆಟದ ನೆರವಿನಿಂದ 20 ಓವರ್ಗಳಲ್ಲಿ 203 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಮಂಧಾನ-ವೋಲ್ ಐತಿಹಾಸಿಕ ಜೊತೆಯಾಟ
204 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ಸ್ಪೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ಕೇವಲ 9 ರನ್ ಗಳಿಸಿ ಔಟಾದಾಗ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಆದರೆ, ನಂತರ ಒಂದಾದ ನಾಯಕಿ ಸ್ಮೃತಿ ಮಂಧಾನ ಮತ್ತು ಯುವ ಪ್ರತಿಭೆ ಜಾರ್ಜಿಯಾ ವೋಲ್ ಡೆಲ್ಲಿ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಸ್ಮೃತಿ ಮಂಧಾನ ಕೇವಲ 41 ಎಸೆತಗಳಲ್ಲಿ 87 ರನ್ (12 ಬೌಂಡರಿ, 3 ಸಿಕ್ಸರ್) ಚಚ್ಚಿದರೆ, ಜಾರ್ಜಿಯಾ ವೋಲ್ 54 ಎಸೆತಗಳಲ್ಲಿ 79 ರನ್ ಸಿಡಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಇವರಿಬ್ಬರ ನಡುವಿನ 165 ರನ್ಗಳ ದಾಖಲೆಯ ಜೊತೆಯಾಟವು WPL ಇತಿಹಾಸದಲ್ಲೇ ಅತ್ಯುತ್ತಮ ಎನಿಸಿಕೊಂಡಿತು.
ಇದನ್ನೂ ಓದಿ | 2024 ರ ಸೇಡು ತೀರಿಸಿಕೊಳ್ಳುತ್ತಾ ಡೆಲ್ಲಿ? ಅಥವಾ ಮತ್ತೆ ಚಾಂಪಿಯನ್ ಆಗುತ್ತಾ ಸ್ಮೃತಿ ಪಡೆ
ರೋಚಕ ಅಂತ್ಯ ಮತ್ತು ವಿಜಯೋತ್ಸವ
ಕೊನೆಯ ಓವರ್ನಲ್ಲಿ ಗೆಲುವಿಗೆ 10 ರನ್ಗಳ ಅಗತ್ಯವಿದ್ದಾಗ, ರಾಧಾ ಯಾದವ್ ಸತತ ಎರಡು ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಮುಗಿಸಿದರು. ಈ ಗೆಲುವಿನೊಂದಿಗೆ ಆರ್ಸಿಬಿ ಫ್ರಾಂಚೈಸಿ ಸತತ ಮೂರು ವರ್ಷಗಳ ಕಾಲ (2024ರಲ್ಲಿ ಮಹಿಳೆಯರು, 2025ರಲ್ಲಿ ಪುರುಷರು ಮತ್ತು 2026ರಲ್ಲಿ ಮಹಿಳೆಯರು) ಟ್ರೋಫಿ ಗೆದ್ದ ವಿಶಿಷ್ಟ ಹ್ಯಾಟ್ರಿಕ್ ಸಾಧನೆ ಮಾಡಿತು. ಸ್ಮೃತಿ ಮಂಧಾನ ಅವರು ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ ‘ಆರೆಂಜ್ ಕ್ಯಾಪ್’ ಕೂಡ ಮುಡಿಗೇರಿಸಿಕೊಂಡರು.
