ಬೆಂಗಳೂರು: ಕನ್ನಡದ ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ವತಿಯಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಕಳೆದ ಗುರುವಾರ (ಜನವರಿ 29) ಪ್ರಾರಂಭವಾದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು ಶುಕ್ರವಾರ (ಫೆಬ್ರವರಿ 06) ಸಮಾರೋಪ ಕಾಣಲಿದ್ದು, ಈ ಸಮಾರಂಭದಲ್ಲಿ ಹಂಸಲೇಖ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಈ ಸಂಬಂಧ ಇಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ವಿನೋದ್ ಚಂದ್ರ ಮತ್ತು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ಮುರಳಿ ಅವರು ಹಂಸಲೇಖ ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿದರು.
ಕಳೆದ ಒಂದು ವಾರದಿಂದ ಸಿನಿಮಾಸಕ್ತರ ಮನಸ್ಸು ಗೆದ್ದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭ, ಇಂದು ಸಂಜೆ 6ಗಂಟೆಗೆ ಚಿತ್ರ ಪ್ರದರ್ಶನ ನಡೆಯುತ್ತಿರುವ ಲುಲು ಮಾಲ್ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಹಂಸಲೇಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇದನ್ನೂ ಓದಿ | 17ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಏಳುಮಲೆ’ ಚಿತ್ರ ಪ್ರದರ್ಶನ
ಸಮಾರೋಪದ ಹೈಲೈಟ್ಸ್
ಈ ಚಿತ್ರೋತ್ಸವದಲ್ಲಿ ಏಷ್ಯನ್ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ಎಂಬ ಮೂರು ಸ್ಪರ್ಧಾ ವಿಭಾಗಗಳಿದ್ದು, ಈ ವಿಭಾಗಗಳಲ್ಲಿ ಸ್ಪರ್ಧಿಸಿ, ಪ್ರಶಸ್ತಿ ಗೆದ್ದವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಡಾ. ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲಾ, ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಮುಂತಾದವರು ಭಾಗವಹಿಸಲಿದ್ದಾರೆ.
