ಚಿತ್ರ ಕೃಪೆ : ಪಬ್ಲಿಕ್ ಟಿವಿ
ಬೆಳಗಾವಿ: ಪತ್ರಕರ್ತರೆಂದು ಹೇಳಿಕೊಂಡು ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ಜೀವನದ ದೃಶ್ಯಗಳನ್ನು ಸೆರೆಹಿಡಿದು, ಬೃಹತ್ ಮೊತ್ತದ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮೂವರು ಕಿರಾತಕರನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯೊಬ್ಬರ ಮನೆಗೆ ನುಗ್ಗಿದ್ದ ಈ ನಕಲಿ ಪತ್ರಕರ್ತರ ತಂಡ, ಯಾರೂ ಇಲ್ಲದ ವೇಳೆ ಬೆಡ್ರೂಮ್ನ ಲೈಟಿಂಗ್ ಹೋಲ್ಡರ್ಗಳಲ್ಲಿ ಅತ್ಯಾಧುನಿಕ ‘ಹಿಡನ್ ಕ್ಯಾಮೆರಾ’ಗಳನ್ನು (ರಹಸ್ಯ ಕ್ಯಾಮೆರಾ) ಅಳವಡಿಸಿತ್ತು. ಅಧಿಕಾರಿಯ ಖಾಸಗಿ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾದ ಬಳಿಕ, ಆ ವಿಡಿಯೋಗಳನ್ನು ಇಟ್ಟುಕೊಂಡು ಆರೋಪಿಗಳು ಬ್ಲ್ಯಾಕ್ಮೇಲ್ ಮಾಡಲು ಶುರು ಮಾಡಿದ್ದರು.
50 ಲಕ್ಷಕ್ಕೆ ಬೇಡಿಕೆ ಮತ್ತು ಬೆದರಿಕೆ:
ಖಾಸಗಿ ವಿಡಿಯೋಗಳನ್ನು ತೋರಿಸಿ ಬೆದರಿಸಿದ್ದ ಈ ಗ್ಯಾಂಗ್, ಬರೋಬ್ಬರಿ 50 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿತ್ತು. ಒಂದು ವೇಳೆ ಹಣ ನೀಡದಿದ್ದರೆ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಮತ್ತು ವಾರ್ತಾ ವಾಹಿನಿಗಳಲ್ಲಿ ಬಿತ್ತರಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ತೀವ್ರ ಮಾನಸಿಕ ಕಿರುಕುಳಕ್ಕೊಳಗಾದ ಮಹಿಳಾ ಅಧಿಕಾರಿ, ಧೈರ್ಯಗೆಡದೆ ಬೆಳಗಾವಿ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು.
ಇದನ್ನೂ ಓದಿ | ಜಲಂಧರ್ನಲ್ಲಿ ಹಾಡಹಗಲೇ ಎಎಪಿ ನಾಯಕನ ಹತ್ಯೆ: ಪಂಜಾಬ್ನಲ್ಲಿ ಕಾನೂನು ಸುವ್ಯವಸ್ಥೆ ತಲ್ಲಣ!
ಪೊಲೀಸರ ಕಾರ್ಯಾಚರಣೆ:
ದೂರು ದಾಖಲಿಸಿಕೊಂಡ ಮಾಳಮಾರುತಿ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಬಲೆ ಬೀಸಿದ್ದರು. ಹಣ ಪಡೆಯಲು ಬಂದ ಸಂದರ್ಭದಲ್ಲಿ ಮೂವರು ನಕಲಿ ಪತ್ರಕರ್ತರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ಗಳು ಮತ್ತು ರಹಸ್ಯ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ರಿಕೋದ್ಯಮದ ಹೆಸರಿನಲ್ಲಿ ಇಂತಹ ಹೀನ ಕೃತ್ಯ ಎಸಗಿದವರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
