ವಾಷಿಂಗ್ಟನ್/ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಮಧ್ಯಂತರ ವ್ಯಾಪಾರ ಒಪ್ಪಂದದ ಬೆನ್ನಲ್ಲೇ, ಅಮೆರಿಕದ ‘ಯುನೈಟೆಡ್ ಸ್ಟೇಟ್ಸ್ ಆಫ್ ಟ್ರೇಡ್ ರೆಪ್ರೆಸೆಂಟೇಟಿವ್’ (USTR) ಬಿಡುಗಡೆ ಮಾಡಿರುವ ಭಾರತದ ಭೂಪಟವು ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಸರ್ಕಾರ ಬಿಡುಗಡೆ ಮಾಡಿರುವ ಈ ಅಧಿಕೃತ ನಕ್ಷೆಯಲ್ಲಿ ಇಡೀ ಕಾಶ್ಮೀರವನ್ನು ಭಾರತದ ಭಾಗವೆಂದು ತೋರಿಸಲಾಗಿದ್ದು, ವಿಶೇಷವಾಗಿ ಪಾಕ್ ಆಕ್ರಮಿತ ಕಾಶ್ಮೀರವನ್ನು (PoK) ಭಾರತದ ನಕ್ಷೆಯಲ್ಲೇ ಅಳವಡಿಸಲಾಗಿದೆ.
ಪಾಕಿಸ್ತಾನಕ್ಕೆ ಸದ್ದಿಲ್ಲದೆ ತಿರುಗೇಟು
ಇದುವರೆಗೆ ಕಾಶ್ಮೀರ ವಿಚಾರದಲ್ಲಿ ತಟಸ್ಥ ಧೋರಣೆ ಅಥವಾ ವಿವಾದಿತ ಪ್ರದೇಶ ಎಂಬ ನಿಲುವು ತಳೆಯುತ್ತಿದ್ದ ಅಮೆರಿಕ, ಈಗ ನೇರವಾಗಿಯೇ ಭಾರತದ ರಾಜಕೀಯ ನಕ್ಷೆಗೆ ಸಮ್ಮತಿ ಸೂಚಿಸಿದೆ. ಪಾಕಿಸ್ತಾನವು ಕಾಶ್ಮೀರದ ವಿಚಾರವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವಾಗಲೇ ಅಮೆರಿಕದ ಈ ನಡೆ ಇಸ್ಲಾಮಾಬಾದ್ಗೆ ದೊಡ್ಡ ಹಿನ್ನಡೆಯಾಗಿದೆ. ‘ಮೇಕ್ ಇನ್ ಇಂಡಿಯಾ’ ಮತ್ತು ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವ ಹಂತದಲ್ಲಿ ಅಮೆರಿಕವು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿರುವುದು ಮೋದಿ ಸರ್ಕಾರದ ರಾಜತಾಂತ್ರಿಕ ವಿಜಯ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ | ಭಾರತೀಯ ಸರಕುಗಳ ಮೇಲಿನ ಶೇ. 25ರಷ್ಟು ಸುಂಕ ಕಡಿತಗೊಳಿಸಿದ ಟ್ರಂಪ್
ಬದಲಾದ ಅಮೆರಿಕದ ವಿದೇಶಾಂಗ ನೀತಿ?
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಭಾರತದೊಂದಿಗಿನ ಸಂಬಂಧವು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ಕಾರ್ಯತಂತ್ರದ ಪಾಲುದಾರಿಕೆಯಾಗಿ ಬದಲಾಗುತ್ತಿದೆ ಎಂಬುದಕ್ಕೆ ಈ ನಕ್ಷೆಯೇ ಸಾಕ್ಷಿ. ಪಾಕಿಸ್ತಾನದ ಆಕ್ಷೇಪಣೆಗಳನ್ನು ಲೆಕ್ಕಿಸದೆ ಕಾಶ್ಮೀರವನ್ನು ಭಾರತದ ನಕ್ಷೆಯಲ್ಲಿ ಪೂರ್ಣವಾಗಿ ತೋರಿಸಿರುವುದು, ದಕ್ಷಿಣ ಏಷ್ಯಾದಲ್ಲಿ ಭಾರತವೇ ಅಮೆರಿಕದ ಅತ್ಯಂತ ನಂಬಿಕಸ್ತ ಮಿತ್ರ ಎಂಬುದನ್ನು ಸಾಬೀತುಪಡಿಸಿದೆ. ಈ ಬೆಳವಣಿಗೆಯು ಗಡಿ ವಿಚಾರದಲ್ಲಿ ಭಾರತದ ನಿಲುವಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬಲ ನೀಡಲಿದೆ.
