ಇಸ್ಲಾಮಾಬಾದ್: ದಶಕಗಳಿಂದ ಅಮೆರಿಕದ ಮಿತ್ರರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ, ಈಗ ಅಮೆರಿಕದ ವಿರುದ್ಧವೇ ಬಹಿರಂಗವಾಗಿ ಕಿಡಿಕಾರುತ್ತಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಸಂಸತ್ತಿನಲ್ಲಿ ಮಾತನಾಡುವಾಗ, “ಅಮೆರಿಕವು ತನ್ನ ಕಾರ್ಯಸಾಧನೆಗಾಗಿ ನಮ್ಮ ದೇಶವನ್ನು ಅತ್ಯಂತ ಹೀನಾಯವಾಗಿ ಬಳಸಿಕೊಂಡಿದೆ. ತನ್ನ ಹಿತಾಸಕ್ತಿಗಳು ಈಡೇರಿದ ನಂತರ ನಮ್ಮನ್ನು ‘ಟಾಯ್ಲೆಟ್ ಪೇಪರ್’ ನಂತೆ ಎಸೆದಿದೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಎರಡು ಅಫ್ಘಾನ್ ಯುದ್ಧಗಳು ಮತ್ತು ಪಾಕಿಸ್ತಾನದ ತಪ್ಪುಗಳು
ಖವಾಜಾ ಆಸಿಫ್ ಅವರ ಪ್ರಕಾರ, ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ನಡೆದ ಎರಡು ಪ್ರಮುಖ ಯುದ್ಧಗಳಲ್ಲಿ ಭಾಗವಹಿಸಿದ್ದು ಐತಿಹಾಸಿಕ ತಪ್ಪು.
- ಮೊದಲ ತಪ್ಪು (1980ರ ದಶಕ): ರಷ್ಯಾ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಪರವಾಗಿ ಪಾಕಿಸ್ತಾನ ನಿಂತಿತು. ಅಂದು ಜಿಯಾ-ಉಲ್-ಹಕ್ ನೇತೃತ್ವದ ಸರ್ಕಾರವು ಅಮೆರಿಕದ ‘ಬೆಂಬಲದ ಕೋಲು’ ಹಿಡಿಯಲು ಈ ಯುದ್ಧಕ್ಕೆ ಧುಮುಕಿತು. ಇದನ್ನು ‘ಜಿಹಾದ್’ ಎಂದು ಬಿಂಬಿಸಿ ತನ್ನದೇ ಜನರನ್ನು ಸಾವಿನ ದವಡೆಗೆ ತಳ್ಳಿತು ಎಂದು ಆಸಿಫ್ ಒಪ್ಪಿಕೊಂಡಿದ್ದಾರೆ.
- ಎರಡನೇ ತಪ್ಪು (2001ರ ನಂತರ): 9/11 ದಾಳಿಯ ನಂತರ ಪರ್ವೇಜ್ ಮುಷರಫ್ ಅವರ ಅವಧಿಯಲ್ಲಿ ಪಾಕಿಸ್ತಾನವು ಮತ್ತೆ ಅಮೆರಿಕದ ಪರವಾಗಿ ತಾಲಿಬಾನ್ ವಿರುದ್ಧ ತಿರುಗಿಬಿದ್ದಿತು. ಈ ನಿರ್ಧಾರದಿಂದಾಗಿ ಪಾಕಿಸ್ತಾನ ಇಂದು ಭಯೋತ್ಪಾದನೆಯ ‘ಬ್ಯಾಕ್ಲ್ಯಾಶ್’ (ಹಿನ್ನಡೆ) ಅನುಭವಿಸುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನವು ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂಬ ಆರೋಪಗಳನ್ನು ದಶಕಗಳಿಂದ ನಿರಾಕರಿಸುತ್ತಾ ಬಂದಿತ್ತು. ಆದರೆ ಈಗ ಖವಾಜಾ ಆಸಿಫ್, “ನಾವು ಭಯೋತ್ಪಾದನೆಯ ಇತಿಹಾಸವನ್ನು ಪದೇ ಪದೇ ನಿರಾಕರಿಸುತ್ತೇವೆ, ಆದರೆ ಇದು ಹಿಂದಿನ ಸರ್ವಾಧಿಕಾರಿಗಳು ಮಾಡಿದ ದೊಡ್ಡ ತಪ್ಪು,” ಎಂದು ಸತ್ಯ ಒಪ್ಪಿಕೊಂಡಿದ್ದಾರೆ. ಈ ಯುದ್ಧಗಳಿಂದಾಗಿ ಪಾಕಿಸ್ತಾನವು ಸುಮಾರು 75,000 ನಾಗರಿಕರನ್ನು ಕಳೆದುಕೊಂಡಿದೆ ಮತ್ತು ಆರ್ಥಿಕವಾಗಿ 123 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಆದರೆ ಬದಲಾಗಿ ಅಮೆರಿಕದಿಂದ ಸಿಕ್ಕಿದ್ದು ಕೇವಲ 20 ಬಿಲಿಯನ್ ಡಾಲರ್ ಮಾತ್ರ ಎಂದು ಅವರು ಅಂಕಿಅಂಶಗಳನ್ನು ನೀಡಿದ್ದಾರೆ.
ಇದನ್ನೂ ಓದಿ | ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ‘ವಂದೇ ಮಾತರಂ’ ಕಡ್ಡಾಯ
ಶಿಕ್ಷಣ ಮತ್ತು ಸಮಾಜದ ಮೇಲೆ ಪರಿಣಾಮ
ಯುದ್ಧದ ಪ್ರಚಾರಕ್ಕಾಗಿ ಪಾಕಿಸ್ತಾನವು ತನ್ನ ಶಾಲಾ ಪಠ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿತ್ತು. ಈ ವಿಷಯದ ಬಗ್ಗೆ ಮಾತನಾಡುತ್ತಾ, “ನಾವು ಅಮೆರಿಕದ ಹಿತಾಸಕ್ತಿಗಾಗಿ ಮಕ್ಕಳ ಪಠ್ಯದಲ್ಲಿ ದ್ವೇಷ ಮತ್ತು ಯುದ್ಧದ ಅಂಶಗಳನ್ನು ಸೇರಿಸಿದೆವು. ಆ ತಪ್ಪುಗಳನ್ನು ನಾವು ಇಂದಿಗೂ ಸರಿಪಡಿಸಲು ಸಾಧ್ಯವಾಗಿಲ್ಲ,” ಎಂದು ಆಸಿಫ್ ಹತಾಶೆ ವ್ಯಕ್ತಪಡಿಸಿದ್ದಾರೆ. ಇಂದು ಪಾಕಿಸ್ತಾನದಲ್ಲಿ ಮಸೀದಿಗಳು ಮತ್ತು ಸಾರ್ವಜನಿಕ ಸ್ಥಳಗಳ ಮೇಲೆ ನಡೆಯುತ್ತಿರುವ ದಾಳಿಗಳು ಆ ಹಳೆಯ ತಪ್ಪುಗಳ ಪರಿಣಾಮವೇ ಆಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
