ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಕುರಿತು ಕೇಳಿಬರುತ್ತಿರುವ ವದಂತಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪೂರ್ಣವಿರಾಮ ಇಡಲು ಪ್ರಯತ್ನಿಸಿದ್ದಾರೆ. “ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಏನು ಹೇಳುತ್ತದೋ ಅದರಂತೆ ನಾನು ಮತ್ತು ಡಿ.ಕೆ. ಶಿವಕುಮಾರ್ ನಡೆದುಕೊಳ್ಳುತ್ತೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಡಿಕೆ ಸುರೇಶ್ ಹೇಳಿಕೆಗೆ ಸಿಎಂ ಗರಂ
ಇತ್ತೀಚೆಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, “ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಮಾತಿನಂತೆ ಕುರ್ಚಿ ಬಿಟ್ಟುಕೊಡುತ್ತಾರೆ ಎಂಬ ವಿಶ್ವಾಸ ನಮಗಿದೆ” ಎಂದು ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ನಿಮಗೆ ಈ ವಿಚಾರ ಬಿಟ್ಟು ಬೇರೇನೂ ಕೇಳಲು ಬರಲ್ವಾ? ಕಳೆದ ಮೂರು ತಿಂಗಳಿಂದ ಇದನ್ನೇ ಶುರು ಮಾಡಿದ್ದೀರಿ. ದಯಮಾಡಿ ಇನ್ಮೇಲೆ ಈ ಪ್ರಶ್ನೆಯನ್ನು ಕೇಳಬೇಡಿ. ಹೈಕಮಾಂಡ್ಗೆ ಎಲ್ಲವೂ ತಿಳಿದಿದೆ ಮತ್ತು ಅವರೇ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ,” ಎಂದು ಸಿದ್ದರಾಮಯ್ಯ ಖಡಕ್ ಆಗಿ ಉತ್ತರಿಸಿದರು.

ಅಧಿಕಾರ ಹಂಚಿಕೆ ಸೂತ್ರದ ಹಿನ್ನೆಲೆ
2023ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ‘ಅಧಿಕಾರ ಹಂಚಿಕೆ’ (Power Sharing) ಒಪ್ಪಂದ ನಡೆದಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಮೊದಲ 30 ತಿಂಗಳು ಸಿದ್ದರಾಮಯ್ಯ ಮತ್ತು ಉಳಿದ 30 ತಿಂಗಳು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಈ ಚರ್ಚೆಯ ಸಾರಾಂಶವಾಗಿತ್ತು. ಆದರೆ, ಅಧಿಕೃತವಾಗಿ ಹೈಕಮಾಂಡ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಈಗ ಸರ್ಕಾರ ಅಧಿಕಾರಕ್ಕೆ ಬಂದು ಸರಿಸುಮಾರು ಎರಡೂವರೆ ವರ್ಷಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ | ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ‘ವಂದೇ ಮಾತರಂ’ ಕಡ್ಡಾಯ
ಸಿಎಂ ಬದಲಾವಣೆ ಚರ್ಚೆಯು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ವಿರೋಧ ಪಕ್ಷವಾದ ಬಿಜೆಪಿ, “ಕಾಂಗ್ರೆಸ್ನಲ್ಲಿ ಸಮನ್ವಯದ ಕೊರತೆಯಿದೆ, ಅಭಿವೃದ್ಧಿಗಿಂತ ಕುರ್ಚಿ ಕಾದಾಟವೇ ಹೆಚ್ಚಾಗಿದೆ” ಎಂದು ಟೀಕಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಇಂದಿನ ಹೇಳಿಕೆಯು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ನಿವಾರಿಸುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.
