ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಬಜೆಟ್ ಚರ್ಚೆಯಲ್ಲಿ ಭಾಗವಹಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಮೆರಿಕದೊಂದಿಗೆ ಮಾಡಿಕೊಂಡಿರುವ ಮಧ್ಯಂತರ ವ್ಯಾಪಾರ ಒಪ್ಪಂದವನ್ನು “ದೇಶ ಮಾರಾಟದ ಒಪ್ಪಂದ” ಎಂದು ಕರೆದಿದ್ದಾರೆ. ಈ ಒಪ್ಪಂದದಿಂದಾಗಿ ಭಾರತದ 140 ಕೋಟಿ ಜನರ ಅಮೂಲ್ಯವಾದ ‘ಡೇಟಾ’ (ಮಾಹಿತಿ) ಅಮೆರಿಕದ ಪಾಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಡೇಟಾ ಎಂಬುದು 21ನೇ ಶತಮಾನದ ಶಕ್ತಿ
“ಇಂದು ಜಗತ್ತು ಸ್ಥಿರತೆಯಿಂದ ಅಸ್ಥಿರತೆಯತ್ತ ಸಾಗುತ್ತಿದೆ. ಇಂತಹ ಕಾಲದಲ್ಲಿ ದೇಶದ ಶಕ್ತಿಯನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ನಮ್ಮ ದೇಶದ ಅತಿ ದೊಡ್ಡ ಶಕ್ತಿ ನಮ್ಮ ಜನರು ಮತ್ತು ಅವರು ಸೃಷ್ಟಿಸುವ ಡೇಟಾ,” ಎಂದು ರಾಹುಲ್ ಹೇಳಿದರು. ಈ ಡೇಟಾವನ್ನು ಬಳಸಿಕೊಂಡು ಅಮೆರಿಕವು ತನ್ನ ಡಾಲರ್ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಮೋದಿ ಸರ್ಕಾರವು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಈ ಡೇಟಾವನ್ನು ಅಮೆರಿಕಕ್ಕೆ ಬಿಟ್ಟುಕೊಡುತ್ತಿದೆ ಎಂದು ರಾಗಾ ಆತಂಕ ವ್ಯಕ್ತಪಡಿಸಿದರು.
“ಪ್ರಧಾನಿಯವರನ್ನು ಕಟ್ಟಿಹಾಕಲಾಗಿದೆ”
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದವು ಸಂಪೂರ್ಣ ಏಕಪಕ್ಷೀಯವಾಗಿದೆ. “ಯಾವುದೇ ಭಾರತೀಯ ಪ್ರಧಾನಿಯೂ ಇಂತಹ ಶರಣಾಗತಿಯ ಒಪ್ಪಂದಕ್ಕೆ ಸಹಿ ಹಾಕುತ್ತಿರಲಿಲ್ಲ. ಪ್ರಧಾನಿ ಮೋದಿಯವರ ಮೇಲೆ ಯಾವುದೋ ದೊಡ್ಡ ಒತ್ತಡವಿದೆ. ಅಮೆರಿಕವು ಅವರನ್ನು ಹಿಡಿತಕ್ಕೆ (Chokehold) ತೆಗೆದುಕೊಂಡಿದೆ,” ಎಂದು ರಾಹುಲ್ ಲೇವಡಿ ಮಾಡಿದರು. ಇದು ರೈತರ ಶ್ರಮ ಮತ್ತು ದೇಶದ ಭವಿಷ್ಯವನ್ನು ಬಲಿಕೊಡುವ ಒಪ್ಪಂದ ಎಂದು ಅವರು ಬಣ್ಣಿಸಿದರು.
ಇದನ್ನೂ ಓದಿ | ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ‘ವಂದೇ ಮಾತರಂ’ ಕಡ್ಡಾಯ
ಒಂದು ವೇಳೆ ‘ಇಂಡಿಯಾ’ ಒಕ್ಕೂಟವು ಅಧಿಕಾರದಲ್ಲಿದ್ದಿದ್ದರೆ, ಅಮೆರಿಕದೊಂದಿಗೆ ಸಮಾನವಾಗಿ ಮಾತುಕತೆ ನಡೆಸುತ್ತಿತ್ತು. “ನಮಗೆ ನಿಮ್ಮ ಡಾಲರ್ ಮತ್ತು ತಂತ್ರಜ್ಞಾನ ಬೇಕು ನಿಜ, ಆದರೆ ಅದಕ್ಕೆ ಪ್ರತಿಯಾಗಿ ನಾವು ನಮ್ಮ ಡೇಟಾವನ್ನು ಮಾರಾಟ ಮಾಡುವುದಿಲ್ಲ ಮತ್ತು ನಾವು ನಿಮ್ಮ ಆಳುಗಳಲ್ಲ ಎಂಬ ಸಂದೇಶವನ್ನು ಅಮೆರಿಕಕ್ಕೆ ನೀಡುತ್ತಿದ್ದೆವು,” ಎಂದು ಅವರು ಗುಡುಗಿದರು.
