ಪಲ್ಲೆಕೆಲೆ: ಐಸಿಸಿ ಟಿ-20 ವಿಶ್ವಕಪ್ 2026ರ ಗ್ರೂಪ್ ಹಂತದ ಮಹತ್ವದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಆತಿಥೇಯ ಶ್ರೀಲಂಕಾ ತಂಡ ಭರ್ಜರಿಯಾಗಿ ‘ಸೂಪರ್-8’ ಹಂತಕ್ಕೆ ಪ್ರವೇಶಿಸಿದೆ.
ಸೋಮವಾರ ರಾತ್ರಿ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಂಕಾ ಪಡೆಯ ಆಲ್ರೌಂಡ್ ಆಟದ ಮುಂದೆ ಆಸೀಸ್ ಪಡೆ ಮಂಡಿಯೂರಿತು. ಈ ಸೋಲಿನೊಂದಿಗೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳುವ ಭೀತಿಗೆ ಸಿಲುಕಿದೆ.
ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಸ್ಫೋಟಕ ಆರಂಭ ಒದಗಿಸಿದರು. ಕೇವಲ 8 ಓವರ್ಗಳಲ್ಲಿ ಈ ಜೋಡಿ 104 ರನ್ ಸಿಡಿಸಿ ಲಂಕಾ ಬೌಲರ್ಗಳ ಬೆವರಿಳಿಸಿತು. ಟ್ರಾವಿಸ್ ಹೆಡ್ 29 ಎಸೆತಗಳಲ್ಲಿ 56 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 27 ಎಸೆತಗಳಲ್ಲಿ 54 ರನ್ ಚಚ್ಚಿದರು.
ಆಸೀಸ್ ದಿಢೀರ್ ಕುಸಿತ: 104 ರನ್ಗಳವರೆಗೆ ಒಂದೇ ಒಂದು ವಿಕೆಟ್ ಕಳೆದುಕೊಳ್ಳದ ಆಸ್ಟ್ರೇಲಿಯಾ, ಲಂಕಾ ಸ್ಪಿನ್ನರ್ಗಳ ದಾಳಿಗೆ ತತ್ತರಿಸಿ ದಿಢೀರ್ ಕುಸಿತ ಕಂಡಿತು. ಅಪಾಯಕಾರಿ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ (22) ಮತ್ತು ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ (27) ಹೊರತುಪಡಿಸಿ ಉಳಿದ್ಯಾವ ಆಟಗಾರರೂ ಎರಡಂಕಿ ದಾಟಲಿಲ್ಲ. ಕ್ಯಾಮರೂನ್ ಗ್ರೀನ್ (3), ಟಿಮ್ ಡೇವಿಡ್ (6) ನಿರಾಸೆ ಮೂಡಿಸಿದರು. ಪರಿಣಾಮ 20 ಓವರ್ಗಳಲ್ಲಿ ಆಸ್ಟ್ರೇಲಿಯಾ 181 ರನ್ಗಳಿಗೆ ಆಲೌಟ್ ಆಯಿತು. ಶ್ರೀಲಂಕಾ ಪರ ಸ್ಪಿನ್ನರ್ ದುಶಾನ್ ಹೇಮಂತ 37 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ | ಪಾಕ್ ವಿರುದ್ಧ ಗೆದ್ದು ದೇಶಕ್ಕೆ ಶಿವರಾತ್ರಿ ಉಡುಗೊರೆ ನೀಡಿದ ಟೀಮ್ ಇಂಡಿಯಾ
ನಿಸ್ಸಾಂಕ ಭರ್ಜರಿ ಶತಕ: ಆಸ್ಟ್ರೇಲಿಯಾ ನೀಡಿದ 182 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕ ಅವರ ಸ್ಫೋಟಕ ಶತಕ ನೆರವಾಯಿತು. ಕೇವಲ 52 ಎಸೆತಗಳಲ್ಲಿ ಅಜೇಯ 100 ರನ್ ಸಿಡಿಸಿದ ನಿಸ್ಸಾಂಕ, ಈ ಬಾರಿಯ ವಿಶ್ವಕಪ್ ಟೂರ್ನಿಯ ಮೊದಲ ಶತಕ ವೀರ ಎನಿಸಿಕೊಂಡರು. ಇವರಿಗೆ ಅತ್ಯುತ್ತಮ ಸಾಥ್ ನೀಡಿದ ಕುಸಾಲ್ ಮೆಂಡಿಸ್ 38 ಎಸೆತಗಳಲ್ಲಿ 51 ರನ್ ಗಳಿಸಿದರು. ಇವರಿಬ್ಬರ ನಡುವಿನ 97 ರನ್ಗಳ ಜೊತೆಯಾಟ ಪಂದ್ಯವನ್ನು ಆಸ್ಟ್ರೇಲಿಯಾದ ಕೈಯಿಂದ ಕಸಿದುಕೊಂಡಿತು. ಅಂತಿಮವಾಗಿ ಶ್ರೀಲಂಕಾ ಕೇವಲ 18 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ, 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಈ ಸೋಲಿನ ಮೂಲಕ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳುವ ಅಂಚಿನಲ್ಲಿದ್ದು, ಮುಂದಿನ ಪಂದ್ಯಗಳ ಫಲಿತಾಂಶದ ಮೇಲೆ ಅದರ ಭವಿಷ್ಯ ನಿಂತಿದೆ.
