ಬೆಂಗಳೂರು: ಕನ್ನಡದ ಖ್ಯಾತ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯೊಬ್ಬರ ಖಾಸಗಿ ವಿಡಿಯೋವನ್ನು ಗುಟ್ಟಾಗಿ ಚಿತ್ರೀಕರಿಸಿ, ಬ್ಲ್ಯಾಕ್ಮೇಲ್ ಮಾಡುತ್ತಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇತ್ತೀಚೆಗೆ ನಗರದ ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ.
ಟೂರ್ನಿಯ ಎರಡನೇ ದಿನದಂದು ನಟಿ ವಾಶ್ರೂಮ್ಗೆ ತೆರಳಿದ್ದಾಗ, ಅಲ್ಲಿ ಹೊಂಚು ಹಾಕಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅವರ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾನೆ. ಬಳಿಕ ಆ ವಿಡಿಯೋಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಹಣಕ್ಕಾಗಿ ಪೀಡಿಸಲು ಆರಂಭಿಸಿದ್ದಾನೆ.
ಸ್ನೇಹಿತೆಗೆ ವಿಡಿಯೋ ಕಳುಹಿಸಿದ ಕಿರಾತಕ:
ಸಾಮಾನ್ಯವಾಗಿ ಬ್ಲ್ಯಾಕ್ಮೇಲ್ ಮಾಡುವವರು ನೇರವಾಗಿ ಸಂತ್ರಸ್ತರಿಗೆ ಕರೆ ಅಥವಾ ಸಂದೇಶ ಮಾಡುತ್ತಾರೆ. ಆದರೆ, ಈ ಪ್ರಕರಣದಲ್ಲಿ ಆರೋಪಿಯು ನಟಿಗೆ ನೇರವಾಗಿ ಸಂಪರ್ಕಿಸದೆ, ಅವರ ಆಪ್ತ ಸ್ನೇಹಿತೆಯ ಇನ್ಸ್ಟಾಗ್ರಾಮ್ ಖಾತೆಗೆ ವಿಡಿಯೋ ಕಳುಹಿಸಿದ್ದಾನೆ. ‘Swan.3704722’ ಎಂಬ ನಕಲಿ ಇನ್ಸ್ಟಾಗ್ರಾಮ್ ಐಡಿಯಿಂದ ಸಂದೇಶ ಕಳುಹಿಸಿರುವ ಆರೋಪಿ, “ಈ ವಿಡಿಯೋ ವೈರಲ್ ಆಗಬಾರದೆಂದರೆ ತಕ್ಷಣ ಹಣ ನೀಡಬೇಕು” ಎಂದು ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ | ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾಗೆ ಧಾರ್ಮಿಕ ಸಂಕಷ್ಟ!
ಈ ಸಂಬಂಧ ನಟಿ ಧೈರ್ಯವಾಗಿ ಮುಂದೆ ಬಂದು, ಆರೋಪಿ ಕಳುಹಿಸಿದ ಫೋಟೋ ಮತ್ತು ವಿಡಿಯೋ ಸಾಕ್ಷ್ಯಗಳ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು, ಇನ್ಸ್ಟಾಗ್ರಾಮ್ ಐಡಿ ಜಾಡು ಹಿಡಿದು ಆರೋಪಿಗಾಗಿ ಬಲೆ ಬೀಸಿದ್ದಾರೆ.
