ಬೆಂಗಳೂರು: ಕೆಜಿಎಫ್-2 ಬಳಿಕ ವಿಶ್ವಾದ್ಯಂತ ಅಭಿಮಾನಿಗಳು ಕಾಯುತ್ತಿದ್ದ ಗಳಿಗೆ ಕೊನೆಗೂ ಹತ್ತಿರ ಬಂದಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ದಾಸ್ ನಿರ್ದೇಶನದ ಪ್ಯಾನ್ ಇಂಡಿಯಾ (ಅಲ್ಲ, ಪ್ಯಾನ್ ವರ್ಲ್ಡ್!) ಸಿನಿಮಾ ‘ಟಾಕ್ಸಿಕ್’ (Toxic: A Fairy Tale for Grown-ups) ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಬರುವ ಮಾರ್ಚ್ 19 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.
ಚಿತ್ರತಂಡದ ಮೂಲಗಳ ಪ್ರಕಾರ, ಸಿನಿಮಾದ ಪ್ರಚಾರ ಕಾರ್ಯತಂತ್ರವನ್ನು (Promotional Strategy) ವಿಭಿನ್ನವಾಗಿ ರೂಪಿಸಲಾಗಿದೆ. ಸಾಮಾನ್ಯವಾಗಿ ದೊಡ್ಡ ಸಿನಿಮಾಗಳ ಟ್ರೈಲರ್ ತಿಂಗಳು ಮೊದಲೇ ಬರುತ್ತದೆ. ಆದರೆ, ಪ್ರೇಕ್ಷಕರಲ್ಲಿನ ಕುತೂಹಲವನ್ನು ತುದಿಗಾಲಲ್ಲಿ ನಿಲ್ಲಿಸಲು ‘ಟಾಕ್ಸಿಕ್’ ತಂಡ ನಿರ್ಧರಿಸಿದೆ. ಮಾರ್ಚ್ ಮೊದಲ ವಾರದಲ್ಲಿ, ಅಂದರೆ ಸಿನಿಮಾ ಬಿಡುಗಡೆಗೆ ಕೇವಲ ಒಂದು ಅಥವಾ ಎರಡು ವಾರಗಳಿರುವಾಗ ‘ಬಿಗ್ ಬ್ಯಾಂಗ್’ ಟ್ರೈಲರ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಟೈಟಲ್ ಟೀಸರ್ ಸಾಕಷ್ಟು ಸಂಚಲನ ಮೂಡಿಸಿತ್ತು. ಆದರೆ, ಬರಲಿರುವ ಟ್ರೈಲರ್ ಅದಕ್ಕಿಂತ ನೂರು ಪಟ್ಟು ಹೆಚ್ಚು ಪವರ್ಫುಲ್ ಆಗಿರಲಿದೆಯಂತೆ. ಯಶ್ ಅವರ ಲುಕ್, ಗೀತು ಮೋಹನ್ದಾಸ್ ಅವರು ಸೃಷ್ಟಿಸಿರುವ ಮಾದಕ ಪ್ರಪಂಚ ಮತ್ತು ಆಕ್ಷನ್ ದೃಶ್ಯಗಳು ಪ್ರೇಕ್ಷಕರ ಹುಬ್ಬೇರಿಸುವುದು ಗ್ಯಾರಂಟಿ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನೂ ಓದಿ | ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾಗೆ ಧಾರ್ಮಿಕ ಸಂಕಷ್ಟ!
ಬಾಕ್ಸ್ ಆಫೀಸ್ ಮೇಲೆ ಕಣ್ಣು:
ಕೆವಿಎನ್ ಪ್ರೊಡಕ್ಷನ್ಸ್ (KVN Productions) ಬಂಡವಾಳ ಹೂಡಿರುವ ಈ ಚಿತ್ರವು ಗೋವಾ, ಲಂಡನ್ ಮುಂತಾದ ಕಡೆಗಳಲ್ಲಿ ಚಿತ್ರೀಕರಣಗೊಂಡಿದೆ. ಡ್ರಗ್ಸ್ ಮಾಫಿಯಾ ಹಿನ್ನೆಲೆಯುಳ್ಳ ಕಥಾಹಂದರವನ್ನು ಇದು ಹೊಂದಿದೆ ಎಂದು ಹೇಳಲಾಗುತ್ತಿದ್ದು, ಯಶ್ ಅವರ ಪಾತ್ರ ಮತ್ತು ಶೈಲಿ ಕೆಜಿಎಫ್ಗಿಂತ ಸಂಪೂರ್ಣ ಭಿನ್ನವಾಗಿರಲಿದೆ. ಮಾರ್ಚ್ 19 ರಂದು ಸಿನಿಮಾ ಬಿಡುಗಡೆಯಾದರೆ, ಬೇಸಿಗೆ ರಜೆಯ ಲಾಭ ಚಿತ್ರಕ್ಕೆ ಸಿಗಲಿದ್ದು, ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
