ಕೋಲಾರ/ನವದೆಹಲಿ: ಭಾರತದ ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಮಂಗಳವಾರ (ಫೆ.17) ಐತಿಹಾಸಿಕ ದಿನವಾಗಿ ದಾಖಲಾಗಿದೆ. ಕೋಲಾರ ಜಿಲ್ಲೆಯ ವೇಮಗಲ್ನಲ್ಲಿ ಸ್ಥಾಪನೆಯಾಗಿರುವ ದೇಶದ ಮೊಟ್ಟಮೊದಲ ಖಾಸಗಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ (Final Assembly Line – FAL) ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ವರ್ಚುವಲ್ ಆಗಿ ಚಾಲನೆ ನೀಡಿದರು.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಮತ್ತು ಫ್ರಾನ್ಸ್ನ ಏರ್ಬಸ್ ಹೆಲಿಕಾಪ್ಟರ್ಸ್ ಸಹಭಾಗಿತ್ವದಲ್ಲಿ ಈ ಘಟಕ ತಲೆ ಎತ್ತಿದ್ದು, ‘ಮೇಡ್ ಇನ್ ಇಂಡಿಯಾ’ ಅಭಿಯಾನಕ್ಕೆ ಆನೆಬಲ ತಂದಿದೆ.
ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಬೃಹತ್ ಕಾರ್ಖಾನೆಯಲ್ಲಿ ವಿಶ್ವವಿಖ್ಯಾತ ‘ಏರ್ಬಸ್ ಎಚ್125’ (Airbus H125) ಹೆಲಿಕಾಪ್ಟರ್ಗಳನ್ನು ತಯಾರಿಸಲಾಗುತ್ತದೆ. ಇದು ಭಾರತದ ಖಾಸಗಿ ವಲಯದಲ್ಲಿ ಸ್ಥಾಪನೆಯಾಗಿರುವ ಮೊದಲ ಹೆಲಿಕಾಪ್ಟರ್ ಜೋಡಣಾ ಘಟಕವಾಗಿದೆ ಎಂಬುದು ವಿಶೇಷ. ಈ ಹಿಂದೆ ರಕ್ಷಣಾ ಮತ್ತು ವಿಮಾನಯಾನ ಉತ್ಪಾದನೆಯಲ್ಲಿ ಸರ್ಕಾರಿ ಸ್ವಾಮ್ಯದ ಎಚ್ಎಎಲ್ (HAL) ಏಕಸ್ವಾಮ್ಯ ಹೊಂದಿತ್ತು. ಈಗ ಟಾಟಾ ಸಂಸ್ಥೆ ಆ ಇತಿಹಾಸವನ್ನು ಬದಲಿಸಿದೆ.
ಉದ್ಘಾಟನಾ ಸಮಾರಂಭದ ಹೈಲೈಟ್ಸ್:
ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಘಟಕಕ್ಕೆ ಚಾಲನೆ ನೀಡಿದರೆ, ವೇಮಗಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವೌಟ್ರಿನ್ ಖುದ್ದು ಪಾಲ್ಗೊಂಡಿದ್ದರು. “ಇದು ಕೇವಲ ಕಾರ್ಖಾನೆಯಲ್ಲ, ಭಾರತ ಮತ್ತು ಫ್ರಾನ್ಸ್ ಸ್ನೇಹದ ಗಟ್ಟಿಯಾದ ಸಂಕೇತ,” ಎಂದು ಮೋದಿ ಬಣ್ಣಿಸಿದರು.
ಇದನ್ನೂ ಓದಿ | ‘ಸಮಯ ಬಂದಾಗ ಸಿದ್ದರಾಮಯ್ಯನವರೇ ಕುರ್ಚಿ ಬಿಡ್ತಾರೆ’ : ಡಿಕೆಶಿ ಹೊಸ ಗೂಗ್ಲಿ
ಎಚ್125 ಹೆಲಿಕಾಪ್ಟರ್ ವಿಶೇಷವೇನು?
ಇಲ್ಲಿ ತಯಾರಾಗುವ ಎಚ್125 ಹೆಲಿಕಾಪ್ಟರ್ ಸಿವಿಲ್ (ನಾಗರಿಕ) ಬಳಕೆಯ ಹೆಲಿಕಾಪ್ಟರ್ ಆಗಿದ್ದು, ಇದು ಪ್ರವಾಸೋದ್ಯಮ, ತುರ್ತು ವೈದ್ಯಕೀಯ ಸೇವೆ (Air Ambulance), ವಿಪತ್ತು ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಹೆಚ್ಚು ಉಪಯುಕ್ತವಾಗಿದೆ. ಈ ಘಟಕದಿಂದ 2027ರ ವೇಳೆಗೆ ಮೊದಲ ‘ಮೇಡ್ ಇನ್ ಇಂಡಿಯಾ’ ಹೆಲಿಕಾಪ್ಟರ್ ಹೊರಬರುವ ನಿರೀಕ್ಷೆಯಿದೆ. ಆರಂಭದಲ್ಲಿ ವರ್ಷಕ್ಕೆ 10 ಹೆಲಿಕಾಪ್ಟರ್ ತಯಾರಿಸುವ ಗುರಿ ಹೊಂದಲಾಗಿದ್ದು, ನಂತರ ಈ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಜೊತೆಗೆ, ಇಲ್ಲಿ ತಯಾರಾದ ಹೆಲಿಕಾಪ್ಟರ್ಗಳನ್ನು ದಕ್ಷಿಣ ಏಷ್ಯಾದ ಇತರೆ ದೇಶಗಳಿಗೂ ರಫ್ತು ಮಾಡುವ ಯೋಜನೆಯಿದೆ.
ಈ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಕರ್ನಾಟಕವು ಜಾಗತಿಕ ವೈಮಾನಿಕ ಭೂಪಟದಲ್ಲಿ ಮತ್ತಷ್ಟು ಮಿಂಚಲಿದೆ.
