ನವದೆಹಲಿ: ಭಾರತದ ಪ್ರತಿಷ್ಠಿತ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ (India AI Impact Summit) ಚೀನಾ ಮೂಲದ ರೋಬೋಟ್ ನಾಯಿಯನ್ನು ತನ್ನದೇ ಸಂಶೋಧನೆ ಎಂದು ಬಿಂಬಿಸಿದ ಆರೋಪದ ಮೇಲೆ ಗ್ರೇಟರ್ ನೋಯ್ಡಾ ಮೂಲದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ (Galgotias University) ಶೃಂಗಸಭೆಯಿಂದ ಹೊರಹೋಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ತನ್ನ ಮಳಿಗೆಯಲ್ಲಿ ರೋಬೋಟ್ ನಾಯಿಯೊಂದನ್ನು ಪ್ರದರ್ಶನಕ್ಕೆ ಇಟ್ಟಿತ್ತು. ವಿಶ್ವವಿದ್ಯಾಲಯದ ಪ್ರತಿನಿಧಿಯೊಬ್ಬರು ಮಾಧ್ಯಮದವರಿಗೆ ವಿವರಿಸುತ್ತಾ, “ಇದು ಓರಿಯನ್ (Orion), ಇದನ್ನು ನಮ್ಮ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ,” ಎಂದು ಹೇಳಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದರ ಅಸಲಿಯತ್ತನ್ನು ಬಯಲಿಗೆಳೆದಿದ್ದಾರೆ.
ಚೀನಾ ಕಂಪನಿಯ ‘Unitree Go2’:
ವಿಶ್ವವಿದ್ಯಾಲಯವು ‘ಓರಿಯನ್’ ಎಂದು ಕರೆದ ರೋಬೋಟ್ ವಾಸ್ತವವಾಗಿ ಚೀನಾದ ‘ಯೂನಿಟ್ರೀ’ (Unitree) ಕಂಪನಿ ತಯಾರಿಸಿದ ‘Go2’ ಮಾಡೆಲ್ ರೋಬೋಟ್ ಎಂದು ಪತ್ತೆಯಾಗಿದೆ. ಇದು ಆನ್ಲೈನ್ ಮಾರುಕಟ್ಟೆಯಲ್ಲಿ ಸುಮಾರು 2 ರಿಂದ 3 ಲಕ್ಷ ರೂಪಾಯಿಗಳಿಗೆ ಸುಲಭವಾಗಿ ಲಭ್ಯವಿದೆ. ಸಿದ್ಧವಾಗಿ ಸಿಗುವ ಚೀನಾ ಉತ್ಪನ್ನವನ್ನು ತಂದು, ಅದಕ್ಕೆ ಮರುನಾಮಕರಣ ಮಾಡಿ ‘ಸ್ವದೇಶಿ ಆವಿಷ್ಕಾರ’ ಎಂದು ಬಿಂಬಿಸಲು ಯತ್ನಿಸಿದ್ದು ಟೀಕೆಗೆ ಗುರಿಯಾಗಿದೆ.
ವಿವಿ ಸ್ಪಷ್ಟನೆ ಮತ್ತು ಕ್ರಮ:
ವಿಡಿಯೋ ವೈರಲ್ ಆಗಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ವಿಶ್ವವಿದ್ಯಾಲಯ, “ನಾವು ಈ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಹೇಳಿಲ್ಲ, ವಿದ್ಯಾರ್ಥಿಗಳ ಕಲಿಕೆಗಾಗಿ ಖರೀದಿಸಿದ್ದೇವೆ,” ಎಂದು ಸಮಜಾಯಿಷಿ ನೀಡಿದೆ. ಆದರೆ, ವೈರಲ್ ವಿಡಿಯೋದಲ್ಲಿ ಪ್ರತಿನಿಧಿಯು ಸ್ಪಷ್ಟವಾಗಿ “ಇದು ನಮ್ಮದೇ ಆವಿಷ್ಕಾರ” ಎಂದು ಹೇಳಿರುವುದು ವಿವಿ ವಾದಕ್ಕೆ ತದ್ವಿರುದ್ಧವಾಗಿದೆ.
ಇದನ್ನೂ ಓದಿ | ಕೋಲಾರದಲ್ಲಿ ಮೇಡ್ ಇನ್ ಇಂಡಿಯಾ ಹೆಲಿಕಾಪ್ಟರ್: ಟಾಟಾ-ಏರ್ಬಸ್ ಘಟಕಕ್ಕೆ ಮೋದಿ-ಮ್ಯಾಕ್ರನ್ ಚಾಲನೆ
ಈ ಘಟನೆಯು ಶೃಂಗಸಭೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತಿದ್ದರಿಂದ, ಆಯೋಜಕರು ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ತಮ್ಮ ಮಳಿಗೆಯನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ‘ಮೇಡ್ ಇನ್ ಇಂಡಿಯಾ’ ಹೆಸರಿನಲ್ಲಿ ಚೀನಾ ಉತ್ಪನ್ನ ಪ್ರದರ್ಶಿಸಿದ್ದು ತಾಂತ್ರಿಕ ವಲಯದಲ್ಲಿ ಮುಜುಗರಕ್ಕೆ ಕಾರಣವಾಗಿದೆ.
