Illegal Immigrants Identified: ಕರ್ನಾಟಕದಲ್ಲಿ ಕಳೆದ 3 ತಿಂಗಳಿನಿಂದ ನಡೆಸುತ್ತಿರುವ ಕಟ್ಟುನಿಟ್ಟಿನ ತಪಾಸಣೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶ ಹಾಗೂ ಆಫ್ರಿಕಾದಿಂದ ಬಂದಿರುವ ಶಂಕಿತ ಅಕ್ರಮ ವಲಸಿಗರು ಸೇರಿದಂತೆ ಸುಮಾರು 1,000 ಮಂದಿ ಪತ್ತೆಯಾಗಿದ್ದಾರೆ.
ಬೆಂಗಳೂರು, ಜು.8: ಕಳೆದ 3 ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಸಾವಿರ ಮಂದಿ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅಕ್ರಮ ವಲಸಿಗರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಕಳೆದ 3 ತಿಂಗಳಿನಿಂದ ನಡೆಸುತ್ತಿರುವ ಕಟ್ಟುನಿಟ್ಟಿನ ತಪಾಸಣೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶ ಹಾಗೂ ಆಫ್ರಿಕಾದಿಂದ ಬಂದಿರುವ ಶಂಕಿತ ಅಕ್ರಮ ವಲಸಿಗರು ಸೇರಿದಂತೆ ಸುಮಾರು 1,000 ಮಂದಿಯನ್ನು ಗುರುತಿಸಲಾಗಿದೆ’ ಎಂದು ತಿಳಿಸಿದರು.
‘ಅಕ್ರಮ ವಲಸಿಗರ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದೆ. ಈ ಕಾರ್ಯಾಚರಣೆ ತಾತ್ಕಾಲಿಕವಾಗಿ ನಡೆಸಿ ನಿಲ್ಲಿಸುವುದಲ್ಲ, ನಿರಂತರವಾಗಿ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.
“ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರ ಕುರಿತು ಶೋಧ ನಡೆಸಲಾಗುತ್ತಿದೆ. ಅವರು ಬಾಂಗ್ಲಾದೇಶ ಅಥವಾ ಆಫ್ರಿಕಾದಿಂದ ಬಂದವರಾಗಿರಬಹುದು. ನಾವು ಕಟ್ಟುನಿಟ್ಟಾಗಿ ಹಾಗೂ ಗಂಭೀರವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಕಳೆದ ಮೂರು ತಿಂಗಳಲ್ಲಿ ಸುಮಾರು 1,000 ವಲಸಿಗರನ್ನು ಗುರುತಿಸಲಾಗಿದೆ. ಅವರೆಲ್ಲರೂ ಉತ್ತರ ಭಾರತದಿಂದ ಬರುತ್ತಿದ್ದಾರೆ” ಎಂದು ಅವರು ಹೇಳಿದರು.
