Jake Libby World Record: ಇಂಗ್ಲೆಂಡ್ನ ಡೊಮೆಸ್ಟಿಕ್ ಕ್ರಿಕೆಟ್ ಅಂಗಳದಲ್ಲಿ ರನ್ ಮಳೆ ಹರಿಸುತ್ತಿರುವ ವೋರ್ಸೆಸ್ಟರ್ಶೈರ್ ತಂಡದ ನಾಯಕ ಜೇಕ್ ಲಿಬ್ಬಿ, ಲಿಸ್ಟ್-ಎ (ಏಕದಿನ) ಕ್ರಿಕೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮೆಟ್ರೋ ಬ್ಯಾಂಕ್ ಒನ್-ಡೇ ಕಪ್ ಟೂರ್ನಿಯಲ್ಲಿ ಸತತ 4 ಪಂದ್ಯಗಳಲ್ಲಿ ಬ್ಯಾಕ್-ಟು-ಬ್ಯಾಕ್ ಶತಕ ಸಿಡಿಸುವ ಮೂಲಕ ಲಿಬ್ಬಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಲಿಸ್ಟ್-ಎ (ಏಕದಿನ) ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ಬರೆದಿರುವುದು ಮತ್ಯಾರೂ ಅಲ್ಲ, ಇಂಗ್ಲೆಂಡ್ನ ಅನುಭವಿ ದಾಂಡಿಗ ಜೇಕ್ ಲಿಬ್ಬಿ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ‘ಮೆಟ್ರೋ ಬ್ಯಾಂಕ್ ಒನ್-ಡೇ ಕಪ್’ನಲ್ಲಿ ವೋರ್ಸೆಸ್ಟರ್ಶೈರ್ ಪರ ಕಣಕ್ಕಿಳಿಯುತ್ತಿರುವ ಜೇಕ್ ಬ್ಯಾಕ್ ಟು ಬ್ಯಾಕ್ ನಾಲ್ಕು ಶತಕ ಸಿಡಿಸಿದ್ದಾರೆ.
ಈ ನಾಲ್ಕು ಭರ್ಜರಿ ಶತಕಗಳೊಂದಿಗೆ ಜೇಕ್ ಲಿಬ್ಬಿ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಂದರೆ 50 ಓವರ್ಗಳ ಕ್ರಿಕೆಟ್ನಲ್ಲಿ ಕನಿಷ್ಠ 50 ಇನಿಂಗ್ಸ್ ಆಡಿದ ಆಟಗಾರರಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿಯ ವಿಶ್ವ ದಾಖಲೆ ಇದೀಗ ಜೇಕ್ ಲಿಬ್ಬಿ ಪಾಲಾಗಿದೆ.
ಲಿಸ್ಟ್-ಎ ಕ್ರಿಕೆಟ್ನಲ್ಲಿ ಈವರೆಗೆ 54 ಇನಿಂಗ್ಸ್ ಆಡಿರುವ ಜೇಕ್ ಲಿಬ್ಬಿ 62.46ರ ಸರಾಸರಿಯಲ್ಲಿ ಒಟ್ಟು 2,561 ರನ್ ಕಲೆಹಾಕಿದ್ದಾರೆ. ಈ ಮೂಲಕ ಲಿಸ್ಟ್-ಎ ಕ್ರಿಕೆಟ್ನಲ್ಲಿ ಕನಿಷ್ಠ 50 ಇನಿಂಗ್ಸ್ ಆಡಿ ಅತ್ಯಧಿಕ ಸರಾಸರಿ ಹೊಂದಿರುವ ಬ್ಯಾಟರ್ಗಳ ಪಟ್ಟಿಯಲ್ಲಿ ಲಿಬ್ಬಿ ಅಗ್ರಸ್ಥಾನಕ್ಕೇರಿದ್ದಾರೆ.

