Bihar temple stampede: ಬಿಹಾರದ ಅಶೋಕ ಧಾಮ ದೇವಾಲಯದಲ್ಲಿ ಶ್ರಾವಣ ಸೋಮವಾರ ಭಕ್ತರ ಭಾರೀ ದಟ್ಟಣೆಯಿಂದ ಕಾಲ್ತುಳಿತ ಸಂಭವಿಸಿದ್ದು, 7 ಮಂದಿ ಮೃತಪಟ್ಟಿದ್ದಾರೆ. 12ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಟ್ನಾ(ಬಿಹಾರ), ಆ. 7: ಬಿಹಾರದ ಲಖಿಸರಾಯ್ ಜಿಲ್ಲೆಯ ಅಶೋಕ ಧಾಮ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ (Ashok Dham Temple Stampede) ಕನಿಷ್ಠ 7 ಭಕ್ತರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶ್ರಾವಣ ಮಾಸದ ಸೋಮವಾರದ ಹಿನ್ನೆಲೆಯಲ್ಲಿ ಶಿವನಿಗೆ ಜಲಾಭಿಷೇಕ ನೆರವೇರಿಸಲು ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.![]()
ಬೆಳಗ್ಗೆ 6.30ರಿಂದ 6.45ರ ಸುಮಾರಿಗೆ ಸಮೀಪದ ರೈಲು ನಿಲ್ದಾಣಕ್ಕೆ ಎರಡು ರೈಲುಗಳು ಬಂದ ಬಳಿಕ ಭಕ್ತರ ಸಂಖ್ಯೆ ಏಕಾಏಕಿ ಹೆಚ್ಚಾಯಿತು. ಜನದಟ್ಟಣೆ ಹೆಚ್ಚಾದ ಪರಿಣಾಮ ಬ್ಯಾರಿಕೇಡ್ನ ಒಂದು ಭಾಗ ಮುರಿದು, ಭಕ್ತರು ಪರಸ್ಪರರ ಮೇಲೆ ಬಿದ್ದಿದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲಖಿಸರಾಯ್ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.
ಇದೇ ವೇಳೆ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬಿದ್ದಿದ್ದು, ಅದರಲ್ಲಿ ವಿದ್ಯುತ್ ಹರಿಯುತ್ತಿದೆ ಎಂಬ ವದಂತಿಯೂ ಹರಡಿದೆ. ಇದು ಆತಂಕ ಸೃಷ್ಟಿಯಾಗಿ ಭಕ್ತರು ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದು, ಹಲವರು ಕೆಳಗೆ ಬಿದ್ದು ಕಾಲ್ತುಳಿತ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಆದರೆ ಘಟನೆಗೆ ನಿಖರ ಕಾರಣ ಇನ್ನಷ್ಟೇ ದೃಢಪಡಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರ
ಘಟನೆಯಲ್ಲಿ ಗಾಯಗೊಂಡವರನ್ನು ಲಖಿಸರಾಯ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಬಹುತೇಕರು ಮಹಿಳೆಯರು ಎಂದು ವರದಿಯಾಗಿದೆ. ಘಟನೆ ಬಳಿಕ ಪೊಲೀಸರು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.
