Ancient gold 0coins found during rural employment work: ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುವ ವೇಳೆ ವಿಬಿಜಿ ರಾಮ್ ಜಿ ಕಾಮಗಾರಿ ವೇಳೆ ಕೂಲಿ ಕಾರ್ಮಿಕರಿಗೆ ನಾಣ್ಯಗಳು ಸಿಕ್ಕಿದ್ದು, ಒಟ್ಟು 54.8 ಗ್ರಾಂ ತೂಕ ಹೊಂದಿರುವ ಇವುಗಳ ಮೌಲ್ಯ ಸುಮಾರು ₹8.27 ಲಕ್ಷ ಎಂದು ಅಂದಾಜಿಸಲಾಗಿದೆ.
ಬೆಳಗಾವಿ, ಸೆ.05: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಗಡಿಗೆಯೊಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುವ ವೇಳೆ ನಾಣ್ಯಗಳು ಸಿಕ್ಕಿದ್ದು, ಒಟ್ಟು 54.8 ಗ್ರಾಂ ತೂಕ ಹೊಂದಿರುವ ಇವುಗಳ ಮೌಲ್ಯ ಸುಮಾರು ₹8.27 ಲಕ್ಷ ಎಂದು ಅಂದಾಜಿಸಲಾಗಿದೆ.
ನಾಣ್ಯಗಳು ಪತ್ತೆಯಾದ ಕೂಡಲೇ ಕೂಲಿ ಕಾರ್ಮಿಕರು ಅವುಗಳನ್ನು ಅಧಿಕಾರಿಗಳಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ನಾಣ್ಯಗಳನ್ನು ಹಸ್ತಾಂತರಿಸಲಾಗಿದೆ. ಬಳಿಕ ತಹಶೀಲ್ದಾರ್ ಅವರು ಎಲ್ಲ ನಾಣ್ಯಗಳನ್ನು ಖಜಾನೆಗೆ ಒಪ್ಪಿಸಲಾಗಿದೆ.
ಪತ್ತೆಯಾದ ನಾಣ್ಯಗಳ ಮೇಲೆ ಆನೆಯ ಚಿತ್ರ ಇರುವುದಾಗಿ ತಿಳಿದುಬಂದಿದೆ. ತಲಕಾಡಿನ ಗಂಗರ ರಾಜಲಾಂಛನ ಆನೆಯಾಗಿದ್ದ ಹಿನ್ನೆಲೆಯಲ್ಲಿ, ಈ ನಾಣ್ಯಗಳು ಗಂಗರ ಕಾಲಕ್ಕೆ ಸಂಬಂಧಿಸಿರಬಹುದೇ ಎಂಬ ಕುತೂಹಲ ಮೂಡಿದೆ. ನಾಣ್ಯಗಳು ಕ್ರಿ.ಶ. 10ರಿಂದ 15ನೇ ಶತಮಾನದ ಅವಧಿಗೆ ಸೇರಿದವು ಎಂಬ ಅನುಮಾನ ವ್ಯಕ್ತವಾಗಿದೆ.
