Graded Points System / Negative Points System: ಸಂಚಾರ ನಿಯಮ ಉಲ್ಲಂಘಿಸುವವರನ್ನು ನಿಯಂತ್ರಿಸಲು ಗ್ರೇಡೆಡ್ ಪಾಯಿಂಟ್ ಸಿಸ್ಟಮ್ ಅಥವಾ ಮೈನಸ್ ಪಾಯಿಂಟ್ ನಿಯಮವನ್ನು ಜಾರಿಗೆ ತರಲು ವಾಹನ ಸವಾರರಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ನವದೆಹಲಿ, ಸೆ.11: ಕೇಂದ್ರ ಸರ್ಕಾರ, ಸಂಚಾರ ನಿಯಮ ಉಲ್ಲಂಘಿಸುವವರನ್ನು ನಿಯಂತ್ರಿಸಲು ಗ್ರೇಡೆಡ್ ಪಾಯಿಂಟ್ ಸಿಸ್ಟಮ್ ಅಥವಾ ಮೈನಸ್ ಪಾಯಿಂಟ್ ನಿಯಮವನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ದೇಶದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಯಲು ‘ಶ್ರೇಣೀಕೃತ ಪಾಯಿಂಟ್ ವ್ಯವಸ್ಥೆ’ ಎಂಬ ವಿನೂತನ ನಿಯಮವನ್ನು ಜಾರಿಗೆ ತರಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ. ರಸ್ತೆ ಶಿಸ್ತು ಕಾಪಾಡಲು ಮತ್ತು ಅಪಘಾತಗಳನ್ನು ಕಡಿಮೆ ಮಾಡಲು, ಯುಕೆ, ಜರ್ಮನಿ ಮತ್ತು ಆಸ್ಟ್ರೇಲಿಯಾದಂತಹ ಅಭಿವೃದ್ಧಿ ಹೊಂದಿದ ದೇಶಗಳ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಭಾರತದಲ್ಲೂ ತರಲಾಗುತ್ತಿದೆ.
ಕೇಂದ್ರ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಶ್ರೇಣೀಕೃತ ಪಾಯಿಂಟ್ ವ್ಯವಸ್ಥೆ ಎಂಬ ಹೊಸ ನಿಯಮದಡಿ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಮಾಣಪತ್ರ ಎರಡಕ್ಕೂ ಪಾಯಿಂಟ್ಗಳ ವ್ಯವಸ್ಥೆಯನ್ನು ಜೋಡಿಸಲಾಗುತ್ತದೆ. ಇದರ ಅನ್ವಯ, ನೀವು ಪ್ರತಿ ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದಾಗ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನದ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ನಿಂದ ಪಾಯಿಂಟ್ಗಳನ್ನು ಕಡಿತಗೊಳಿಸಲಾಗುತ್ತದೆ. ಈ ರೀತಿ ಕಡಿತವಾಗುತ್ತಾ ಹೋಗಿ ನಿಯಮಿತ ಮಿತಿಯನ್ನು (ಪ್ರಸ್ತಾವಿತ 12 ಪಾಯಿಂಟ್ಗಳು) ದಾಟಿದರೆ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗುತ್ತದೆ. ಆದರೆ, ಪದೇ ಪದೇ ಇದೇ ತಪ್ಪುಗಳನ್ನು ಮುಂದುವರಿಸಿದರೆ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದು ಮಾಡಲಾಗುತ್ತದೆ.
ಯಾರು ಯಾವುದೇ ತಪ್ಪು ಮಾಡದೆ ಉತ್ತಮವಾಗಿ ವಾಹನ ಚಾಲನೆ ಮಾಡುತ್ತಾರೋ ಅವರಿಗೆ ‘ಮೆರಿಟ್ ಪಾಯಿಂಟ್ಸ್’ (ಒಳ್ಳೆಯ ಪಾಯಿಂಟ್ಸ್) ಸಿಗಲಿವೆ. ಇಂತಹ ಸವಾರರಿಗೆ ವಾಹನ ವಿಮೆ ಪ್ರೀಮಿಯಂನಲ್ಲಿ ರಿಯಾಯಿತಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ನಿಯಮ ಮೀರುವವರಿಗೆ ಭಾರೀ ದಂಡ ಹಾಗೂ ಶಿಕ್ಷೆ ಕಾಯಂ ಆಗಿರುತ್ತದೆ.
ಕ್ಯಾಲೆಂಡರ್ ವರ್ಷದಲ್ಲಿ ಒಬ್ಬ ಚಾಲಕನಿಗೆ 5 ಅಥವಾ ಅದಕ್ಕಿಂತ ಹೆಚ್ಚು ಇ-ಚಲನ್ ಅಥವಾ ಟ್ರಾಫಿಕ್ ಫೈನ್ ಬಿದ್ದರೆ, ಅವರ ಲೈಸೆನ್ಸ್ ತಕ್ಷಣವೇ ರದ್ದಾಗಬಹುದು. ಜೊತೆಗೆ, ಸಂಚಾರ ನಿಯಮ ಉಲ್ಲಂಘನೆಯ ಚಲನ್ ಹಣವನ್ನು 45 ದಿನಗಳ ಒಳಗಾಗಿ ಪಾವತಿಸದಿದ್ದರೆ ನಿಮ್ಮ ವಾಹನವನ್ನು ಬ್ಲಾಕ್ಲಿಸ್ಟ್ಗೆ ಸೇರಿಸಲಾಗುತ್ತದೆ. ಆ ನಂತರ ನೀವು ವಾಹನ ಮಾರಾಟ ಮಾಡಲು ಅಥವಾ ಇನ್ಶೂರೆನ್ಸ್ ನವೀಕರಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ, ಈ ಹಿಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿ ಬ್ಲಾಕ್ ಮಾರ್ಕ್ ಹೊಂದಿರುವವರು ಲೈಸೆನ್ಸ್ ನವೀಕರಿಸಬೇಕಾದರೆ ಕಡ್ಡಾಯವಾಗಿ ಮತ್ತೊಮ್ಮೆ ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಬೇಕಾಗುತ್ತದೆ.
