Cuvery water dispute karnataka ask to reduce water to Tamilnadu: ಕಾವೇರಿ ಜಲಾಶಯಗಳಲ್ಲಿ ಒಳಹರಿವು ಕ್ಷೀಣಿಸಿ 49 ಟಿಎಂಸಿ ನೀರು ಮಾತ್ರ ಲಭ್ಯವಿರುವ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣವನ್ನು 4,000 ಕ್ಯೂಸೆಕ್ಸ್ ಬದಲು 2,000 ಕ್ಯೂಸೆಕ್ಸ್ಗೆ ಇಳಿಸಲು ಸಿಡಬ್ಲ್ಯೂಎಂಎಗೆ ಕರ್ನಾಟಕ ಮನವಿ ಮಾಡಿದೆ. ಕಣಿವೆಯ 47 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಂದ ಗಣನೀಯ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು, ಅ.2: ನೆರೆ ರಾಜ್ಯ ತಮಿಳುನಾಡಿಗೆ ಹರಿಸಲು ಆದೇಶಿಸಿರುವ ಕಾವೇರಿ ನದಿ ನೀರಿನ ಪ್ರಮಾಣವನ್ನು 2,000 ಕ್ಯೂಸೆಕ್ಸ್ಗೆ ಇಳಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA)ಕ್ಕೆ ಕರ್ನಾಟಕ ಮನವಿ ಮಾಡಿದೆ. ಕಾವೇರಿ ಜಲಾಶಯಗಳಿಗೆ ಒಳಹರಿವು ತೀವ್ರವಾಗಿ ಕ್ಷೀಣಿಸಿದೆ. ಕೆಆರ್ಎಸ್ ಸೇರಿದಂತೆ ಕಾವೇರಿ ಕೊಳ್ಳದ ಪ್ರಮುಖ 4 ಜಲಾಶಯಗಳಲ್ಲಿ ಲಭ್ಯವಿರುವ ನೀರು ಕೇವಲ 49 ಟಿಎಂಸಿ ಮಾತ್ರವಾಗಿದೆ. ಈ ಪೈಕಿ ನೀರನ್ನು ಮುಂದಿನ ಜೂನ್ವರೆಗೆ ಕುಡಿಯಲು ಕಾಯ್ದಿರಿಸುವುದು ಅನಿವಾರ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕಣಿವೆಯ 47 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಇಲ್ಲಿಯವರೆಗೆ ಬಿಳಿಗುಂಡ್ಲುವಿನಲ್ಲಿ 44.21 ಟಿಎಂಸಿ ನೀರಿನ ಹರಿವು ದಾಖಲಾಗಿದೆ. ಮತ್ತೆ ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಂದ ಗಣನೀಯ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಉತ್ತಮವಾಗಿರುವ ಭರವಸೆ ಇರುವ ಕಾರಣ ಬಿಳಿಗುಂಡ್ಲುವಿನಲ್ಲಿ ಹರಿಸಬೇಕಾದ ನೀರಿನ ಪ್ರಮಾಣವನ್ನು 4 ಸಾವಿರ ಕ್ಯೂಸೆಕ್ ಬದಲು 2 ಸಾವಿರ ಕ್ಯೂಸೆಕ್ಸ್ಗೆ ತಗ್ಗಿಸುವಂತೆ ಕರ್ನಾಟಕ ಆಗ್ರಹಿಸಿದೆ.
ತೀವ್ರ ಬರದ ಸ್ಥಿತಿಯ ನಡುವೆಯೂ ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 4 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿತ್ತು. ಮತ್ತೊಂದೆಡೆ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರ ಸಂಬಂಧ ಸುಪ್ರೀಂಕೋರ್ಟ್ನಲ್ಲಿಯೂ ಅರ್ಜಿ ವಿಚಾರಣೆ ನಡೆಯುತ್ತಿದ್ದು, CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು. ತಮಿಳುನಾಡಿನ ಆಕ್ಷೇಪಕ್ಕೆ ಒಂದು ವಾರದಲ್ಲಿ ಅಫಿಡವಿಟ್ ಸಲ್ಲಿಸಲು ತಿಳಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿಕೆ ಮಾಡಿತ್ತು.
