High Court: SC, ST reservation rate increase in the state is cancelled, High Court's important order..? - High Court: ರಾಜ್ಯದಲ್ಲಿ SC, ST ಮೀಸಲಾತಿ ಪ್ರಮಾಣ ಹೆಚ್ಚಳ ರದ್ದು, ಹೈಕೋರ್ಟ್ ಮಹತ್ವದ ಆದೇಶ
ಒಟ್ಟು ಮೀಸಲಾತಿ ಮಿತಿಯನ್ನು ಶೇಕಡಾ 50 ರಿಂದ ಶೇಕಡಾ 56 ಕ್ಕೆ ಏರಿಸಿದ್ದ ಸರ್ಕಾರದ ಕ್ರಮ ಸಂವಿಧಾನಬಾಹಿರ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬೆಂಗಳೂರು (ಅ.12): ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಪ್ರಮಾಣ ಹೆಚ್ಚಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಒಟ್ಟು ಮೀಸಲಾತಿ ಮಿತಿಯನ್ನು ಶೇಕಡಾ 50 ರಿಂದ ಶೇಕಡಾ 56 ಕ್ಕೆ ಏರಿಸಿದ್ದ ಸರ್ಕಾರದ ಕ್ರಮ ಸಂವಿಧಾನಬಾಹಿರ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್..?
ರಾಜ್ಯ ಸರ್ಕಾರದಿಂದ SC & ST ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಇಂದು ವಿಚಾರಣೆ ನಡೆಯಿತು. ರಾಜ್ಯದ ಸರ್ಕಾರ ಶೇ.50 ರಿಂದ ಶೇ.56ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿತ್ತು. ಈ ಕಾಯ್ದೆ ಪ್ರಶ್ನಿಸಿ ಮಹೇಂದ್ರ ಕುಮಾರ್ ಮಿಶ್ರಾ ಪಿಐಎಲ್ ಸಲ್ಲಿಸಿದ್ರು.
ಹೈಕೋರ್ಟ್ ಮಹತ್ವದ ಆದೇಶ..?
ಅರ್ಜಿ ವಿಚಾರಣೆ ಬಳಿಕ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿನ ಪ್ರವೇಶಾತಿ ಹಾಗೂ ರಾಜ್ಯಾಧೀನ ಸೇವೆಗಳ (ಸರ್ಕಾರಿ ಉದ್ಯೋಗ) ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಿ ಹಿಂದಿನ ಸರ್ಕಾರ ಕಾಯ್ದೆ ರೂಪಿಸಿತ್ತು. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣವು ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಶೇ. 50 ರ ಗಡಿಯನ್ನು ಮೀರಿ ಶೇ. 56 ಕ್ಕೆ ತಲುಪಿತ್ತು. ಇದಕ್ಕೆ ಸೂಕ್ತ ಸಾಂವಿಧಾನಿಕ ತಳಹದಿ ಇಲ್ಲದ ಕಾರಣ ಹೈಕೋರ್ಟ್ ಇದನ್ನು ರದ್ದುಪಡಿಸಿದೆ.
ಈ ಹೆಚ್ಚಳಕ್ಕೆ ಕಾನೂನು ರಕ್ಷಣೆ ನೀಡಲು ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸುವಂತೆ ರಾಜ್ಯ ಸರ್ಕಾರವು ಈ ಹಿಂದೆ ಕೇಂದ್ರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ಕರ್ನಾಟಕ ಸರ್ಕಾರವು ಹಿಂದೆ ಎಸ್ಸಿ ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಮತ್ತು ಎಸ್ಟಿ ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಿತ್ತು. ಇದರಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ. 50 ರಿಂದ ಶೇ. 56 ಕ್ಕೆ ಏರಿಕೆಯಾಗಿತ್ತು.
