Don’t call 108 in case of emergency! Ambulance employees’ strike begins from Wednesday, what are their demands..? – ತುರ್ತು ಸಂದರ್ಭದಲ್ಲಿ 108ಗೆ ಕರೆ ಮಾಡಬೇಡಿ! ಬುಧವಾರದಿಂದ ಆಂಬ್ಯುಲೆನ್ಸ್ ನೌಕರರ ಮುಷ್ಕರ ಶುರು, ಏನೇನು ಬೇಡಿಕೆ..?
ವಾರ್ಷಿಕ ಹೆಚ್ಚುವರಿ ವೇತನ (ಇನ್ಕ್ರಿಮೆಂಟ್) ನೀಡಬೇಕು, ಕರ್ತವ್ಯದ ಸಮಯ ಸರಿಪಡಿಸಬೇಕು ಹಾಗೂ ವಲಯವಾರು ವಿಂಗಡಿತ ವೇತನ ರದ್ದುಪಡಿಸಬೇಕು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು 108 ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರ ನಡೆಸಲು ಮುಂದಾಗಿದೆ. ಬುಧವಾರದಿಂದಲೇ ಮುಷ್ಕರ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಕುರಿತಾದ ಮತ್ತಷ್ಟು ಮಾಹಿತಿಗಳು ಇಲ್ಲಿವೆ.
ಹೈಲೈಟ್ಸ್:
- ಬುಧವಾರದಿಂದ ಆಂಬ್ಯುಲೆನ್ಸ್ ನೌಕರರ ಮುಷ್ಕರ ಶುರು.
- 108 ಆಂಬ್ಯುಲೆನ್ಸ್ ನೌಕರರ ಬೇಡಿಕೆಗಳು ಏನೇನು.
- ಆಂಬ್ಯುಲೆನ್ಸ್ ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತಾ ಸರ್ಕಾರ.
![]()
ಬೆಂಗಳೂರು: ಆರೋಗ್ಯ ಕವಚ 108 ಆಂಬ್ಯುಲೆನ್ಸ್ ನೌಕರರು ಬುಧವಾರ ರಾತ್ರಿ 10 ಗಂಟೆಯಿಂದಲೇ ಮುಷ್ಕರ ಆರಂಭಿಸಲು ತೀರ್ಮಾನಿಸಿದ್ದಾರೆ. ವೇತನ ಪರಿಷ್ಕರಣೆ ಭರವಸೆ ಈಡೇರಿಸಲು ಸಾಧ್ಯವಿಲ್ಲಎಂದು ಗುತ್ತಿಗೆ ಸಂಸ್ಥೆ ಜಿವಿಕೆ ಸ್ಪಷ್ಟಪಡಿಸಿದ ಬೆನ್ನಲ್ಲೇ ಪುನಃ ಹೋರಾಟಕ್ಕೆ ಮುಂದಾಗಿದ್ದಾರೆ. ಪರಿಣಾಮ ರಾಜ್ಯಾದ್ಯಂತ ತುರ್ತು ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
‘‘ಬುಧವಾರ ರಾತ್ರಿಯಿಂದಲೇ ಕರ್ತವ್ಯಕ್ಕೆ ಗೈರು ಹಾಜರಾಗಲು ಹಾಗೂ ಸಾಮೂಹಿಕ ರಾಜೀನಾಮೆ ಸಲ್ಲಿಸಲು ನಿರ್ಧರಿಸಲಾಗಿದೆ. ಗುರುವಾರದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿಅನಿರ್ದಿಷ್ಟ ಧರಣಿ ನಡೆಸಲಿದ್ದೇವೆ. ಬೆಂಗಳೂರಿನಲ್ಲಿ ಸುಮಾರು 95 ಸೇರಿದಂತೆ ರಾಜ್ಯದಲ್ಲಿ517 ಆಂಬ್ಯುಲೆನ್ಸ್ಗಳಿದ್ದು, ಶುಶ್ರೂಷಕರು ಹಾಗೂ ಚಾಲಕರೂ ಸೇರಿದಂತೆ 3500 ನೌಕರರು ಹೋರಾಟಕ್ಕಿಳಿಯಲಿದ್ದಾರೆ,’’ ಎಂದು ಸುವರ್ಣ ಕರ್ನಾಟಕ 108 ಆರೋಗ್ಯ ಕವಚ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಕವಚ ನೌಕರರ ಸಂಘ ಮಾಹಿತಿ ನೀಡಿದೆ.
‘‘ಗುತ್ತಿಗೆ ಸಂಸ್ಥೆ ಜಿವಿಕೆ, ಆರೋಗ್ಯ ಇಲಾಖೆ ಮಧ್ಯಪ್ರವೇಶಿಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದವು.ಆದರೆ, ಎರಡು ದಿನಗಳ ಹಿಂದೆ ಯುಟರ್ನ್ ಹೊಡೆದು ವೇತನ ಪರಿಷ್ಕರಣೆ ಮಾಡಲ್ಲಎಂದು ಸಂಸ್ಥೆ ಹೇಳಿದೆ. ಹೀಗಾಗಿ, ಪುನಃ ಮುಷ್ಕರದ ಹಾದಿ ಹಿಡಿದಿದ್ದೇವೆ,’’ ಎಂದು ಸಂಘದ ಉಪಾಧ್ಯಕ್ಷ ಪರಮಶಿವ ಅಸಮಾಧಾನ ವ್ಯಕ್ತಪಡಿಸಿದರು.
ಬೇಡಿಕೆಗಳು ಏನೇನು?
- ವಾರ್ಷಿಕ ಹೆಚ್ಚುವರಿ ವೇತನ (ಇನ್ಕ್ರಿಮೆಂಟ್)
- ಕರ್ತವ್ಯದ ಸಮಯ ಸರಿಪಡಿಸಬೇಕು
- ವಲಯವಾರು ವಿಂಗಡಿತ ವೇತನ ರದ್ದುಪಡಿಸಬೇಕು
- ಜೇಷ್ಠತೆ ಆಧಾರದಲ್ಲಿ ವೇತನ ನೀಡಬೇಕು
ಸರ್ಕಾರ ನಡೆ ಏನು?
ಆಂಬ್ಯುಲೆನ್ಸ್ ನೌಕರರ ಬೇಡಿಕೆ ಇಂದು ನಿನ್ನೆಯದ್ದಲ್ಲ. ಈ ಹಿಂದೆಯೂ ಅನೇಕ ಬಾರಿ ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ. ಇದೀಗ ದೊಡ್ಡ ಮಟ್ಟದಲ್ಲೇ ಹೋರಾಟ ರೂಪಿಸಲು ನಿರ್ಧಾರ ಮಾಡಲಾಗಿದೆ. ಆದರೆ, ಆರೋಗ್ಯ ಇಲಾಖೆ ಈ ಬಗ್ಗೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದೆ.
ಈ ಕುರಿತಾಗಿ ಆರೋಗ್ಯ ಸಚಿವ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ‘‘ರಾಜ್ಯದ ಜನತೆ ಇನ್ನೆರಡು ತಿಂಗಳು 108 ಆಂಬ್ಯುಲೆನ್ಸ್ ಸೇವೆ ಅವಲಂಬಿಸಬೇಡಿ. ಈ ಸಾರ್ವಜನಿಕ ಸೇವೆಯ ವ್ಯವಸ್ಥೆಯನ್ನು ಸಂಪೂರ್ಣ ಬದಲಾಯಿಸಿ ಡಿಸೆಂಬರ್ನಿಂದ ಹೊಸ ಸ್ವರೂಪದಲ್ಲಿಜಾರಿಗೊಳಿಸಲಾಗುವುದು. ಮುಷ್ಕರದ ಬ್ಲ್ಯಾಕ್ಮೇಲ್ಗೆ ಸರಕಾರ ಬಗ್ಗಲ್ಲ,’’ ಎಂದು ಯು.ಟಿ.ಖಾದರ್ ಹೇಳಿದ್ದಾರೆ.
‘‘2018 ರಿಂದ 108 ಒಂದಲ್ಲಾಒಂದು ಸಮಸ್ಯೆ ಎದುರಿಸುತ್ತಿದೆ. ಇದನ್ನು ಸರಿಪಡಿಸಲು ಹೊಸ ಟೆಂಡರ್ ನೀತಿ, ಹೊಸ ಆಂಬ್ಯುಲೆನ್ಸ್ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಇದು ಅಂತಿಮಗೊಂಡು ಡಿಸೆಂಬರ್ನಲ್ಲಿಜಾರಿಗೊಳ್ಳಲಿದೆ. ಹಿಂದೆ ನಮ್ಮ ಸರಕಾರವಿದ್ದಾಗ 735 ಆಂಬ್ಯುಲೆನ್ಸ್ಗಳನ್ನು ರಾಜ್ಯಕ್ಕೆ ನೀಡಿದ್ದೆವು. ಈಗ ಕೇವಲ 400 ಆಂಬ್ಯುಲೆನ್ಸ್ಗಳಿವೆ. ಹೀಗಾಗಿ, ಸಮರ್ಪಕ ಸೇವೆ ಲಭ್ಯವಾಗುತ್ತಿಲ್ಲ,’’ ಎಂದರು
