One bus, hundreds of lives: Who is responsible for safe travel?: ಬಸ್ ತಡವಾದರೆ ವಿದ್ಯಾರ್ಥಿಗಳಿಗೆ ತರಗತಿ ತಪ್ಪಬಹುದು, ಉದ್ಯೋಗಿಗಳಿಗೆ ಕೆಲಸದ ಸಮಯದ ಮೇಲೆ ಪರಿಣಾಮ ಬೀಳಬಹುದು. ಸಾರ್ವಜನಿಕ ಸಾರಿಗೆ ನಗರವಾಗಲಿ, ಗ್ರಾಮವಾಗಲಿ, ಅನೇಕ ಜನರ ಬದುಕಿನ ಅವಿಭಾಜ್ಯ ಭಾಗ. ಕೆಲವು ಕಡೆ ಜನರ ಅಗತ್ಯಕ್ಕೆ ತಕ್ಕಷ್ಟು ಬಸ್ಗಳೇ ಇರುವುದಿಲ್ಲ. ಬಸ್ಗಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇನ್ನು ಕೆಲವು ಕಡೆ ಬಸ್ಗಳಿದ್ದರೂ ರಸ್ತೆಗಳ ಸ್ಥಿತಿ ಸರಿಯಾಗಿರುವುದಿಲ್ಲ. ಸುರಕ್ಷಿತ ಪ್ರಯಾಣದ ಹಿಂದೆ ಎಲ್ಲರ ಬದುಕಿದೆ.
![]()
ಬಸ್ ತುಂಬಿರುವಾಗ ಬಾಗಿಲಿನ ಬಳಿ ನಿಂತುಕೊಂಡು ಪ್ರಯಾಣಿಸುವ ವಿದ್ಯಾರ್ಥಿಗಳನ್ನು ಕಂಡಾಗ, ಅವರ ಸುರಕ್ಷತೆಯ ಬಗ್ಗೆ ಚಿಂತೆ ಮೂಡುತ್ತದೆ. ಇನ್ನೊಂದೆಡೆ, ಗ್ರಾಮೀಣ ಪ್ರದೇಶಗಳಲ್ಲಿ ಬಸ್ಗಳ ಕೊರತೆ ಮತ್ತು ಸರಿಯಿಲ್ಲದ ರಸ್ತೆಗಳು ಜನರ ಪ್ರಯಾಣವನ್ನು ಮತ್ತಷ್ಟು ಕಷ್ಟಕರವಾಗಿಸುತ್ತವೆ. ಇಂತಹ ಅನುಭವಗಳು ಸಾರ್ವಜನಿಕ ಸಾರಿಗೆ ಎಂದರೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ವ್ಯವಸ್ಥೆಯಲ್ಲ; ಅದು ಜನರ ಸುರಕ್ಷತೆ, ಸಮಯ ಮತ್ತು ಬದುಕಿನ ಅಗತ್ಯಗಳಿಗೆ ಸಂಬಂಧಿಸಿದ ವಿಷಯ ಎಂಬುದನ್ನು ಮನವರಿಕೆ ಮಾಡಿಕೊಡುತ್ತವೆ.
ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಪ್ರತಿಯೊಬ್ಬರ ದಿನನಿತ್ಯದ ವಾಸ್ತವವನ್ನು ಹೇಳುತ್ತವೆ. ಬಸ್ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿಯಲ್ಲೂ, ಸುರಕ್ಷಿತವಾಗಿ ಪ್ರಯಾಣಿಸಿ ತಮ್ಮ ತಾಣ ತಲುಪುವ ಅವಕಾಶ ಎಲ್ಲರಿಗೂ ಸಿಗುತ್ತಿದೆಯೇ ಎಂಬ ಪ್ರಶ್ನೆ ಉಳಿಯುತ್ತದೆ. ಇದು ಕೇವಲ ಒಂದು ಬಸ್ನ ಕಥೆಯಲ್ಲ. ಆ ಬಸ್ನಲ್ಲಿ ಪ್ರಯಾಣಿಸುವ ನೂರಾರು ಬದುಕುಗಳ ಕಥೆ.
ಸಾರ್ವಜನಿಕ ಸಾರಿಗೆ ನಗರವಾಗಲಿ, ಗ್ರಾಮವಾಗಲಿ, ಅನೇಕ ಜನರ ಬದುಕಿನ ಅವಿಭಾಜ್ಯ ಭಾಗ. ಆದರೆ ಸಮಸ್ಯೆಯ ಸ್ವರೂಪ ಮಾತ್ರ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ನಗರದ ಸಮಸ್ಯೆ ಬೇರೆ, ಗ್ರಾಮದ ಸಮಸ್ಯೆ ಬೇರೆ, ನಗರದಲ್ಲಿ ಸಮಸ್ಯೆ ಯಾವಾಗಲೂ ಬಸ್ಗಳ ಕೊರತೆಯೇ ಆಗಿರಬೇಕೆಂದಿಲ್ಲ..ಇರುವ ಬಸ್ ಸೇವೆಗೆ ಹೋಲಿಸಿದರೆ ಪ್ರಯಾಣಿಕರ ಬೇಡಿಕೆ ಹೆಚ್ಚಿರುವುದರಿಂದಲೂ ಜನದಟ್ಟಣೆ ಉಂಟಾಗುತ್ತದೆ.
ಬಸ್ ಬಂದ ತಕ್ಷಣ ಹತ್ತಲು ನಡೆಯುವ ಆತುರ, ಹತ್ತಲೇ ಬೇಕಾದ ಅನಿವಾರ್ಯತೆ..? ವಿಶೇಷವಾಗಿ, ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡುಬರುತ್ತದೆ. ಬಸ್ ಬಂದ ತಕ್ಷಣ ಹತ್ತಲು ನಡೆಯುವ ಆತುರ ಮತ್ತು ಈಗಾಗಲೇ ತುಂಬಿರುವ ಬಸ್ಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆ ಹಲವರ ದಿನನಿತ್ಯದ ಅನುಭವವಾಗಿದೆ. ಒಂದು ಬಸ್ ತಪ್ಪಿದರೆ ಮುಂದಿನ ಬಸ್ಗಾಗಿ ಕಾಯಬಹುದು ಎಂಬ ಅವಕಾಶ ನಗರಗಳಲ್ಲಿ ಕೆಲವೊಮ್ಮೆ ಇರಬಹುದು. ಆದರೆ ಮುಂದಿನ ಬಸ್ ಕೂಡ ಜನದಟ್ಟಣೆಯಿಂದ ತುಂಬಿದ್ದರೆ ಸಮಸ್ಯೆ ಮತ್ತೆ ಮುಂದುವರಿಯುತ್ತದೆ. ಸಂಚಾರ ದಟ್ಟಣೆಯಿಂದ ಬಸ್ಗಳು ತಡವಾಗುವುದರಿಂದ ಪ್ರಯಾಣದ ಸಮಯವೂ ಹೆಚ್ಚಾಗುತ್ತದೆ.
ಕೆಲವು ಕಡೆ ಜನರ ಅಗತ್ಯಕ್ಕೆ ತಕ್ಕಷ್ಟು ಬಸ್ಗಳೇ ಇರುವುದಿಲ್ಲ. ಬಸ್ಗಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇನ್ನು ಕೆಲವು ಕಡೆ ಬಸ್ಗಳಿದ್ದರೂ ರಸ್ತೆಗಳ ಸ್ಥಿತಿ ಸರಿಯಾಗಿರುವುದಿಲ್ಲ. ಗುಂಡಿಗಳಿಂದ ಕೂಡಿದ ರಸ್ತೆಗಳು, ಕಿರಿದಾದ ಮಾರ್ಗಗಳು ಮತ್ತು ಅಪಾಯಕಾರಿ ತಿರುವುಗಳು ಪ್ರಯಾಣವನ್ನು ಕಷ್ಟಕರವಾಗಿಸುತ್ತವೆ.
ಬಸ್ಗಳಿಲ್ಲದಿದ್ದರೆ ಪ್ರಯಾಣಕ್ಕೆ ವಾಹನದ ಕೊರತೆ; ಬಸ್ಗಳಿದ್ದರೂ ರಸ್ತೆ ಸರಿಯಿಲ್ಲದಿದ್ದರೆ ಸುರಕ್ಷಿತ ಪ್ರಯಾಣಕ್ಕೆ ಅಡ್ಡಿ. ಹೀಗಾಗಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬಸ್ ಸೇವೆ ಹೆಚ್ಚಿಸುವುದರ ಜೊತೆಗೆ ರಸ್ತೆಗಳನ್ನು ಸುಧಾರಿಸುವುದೂ ಅಷ್ಟೇ ಮುಖ್ಯ.
ಆದ್ದರಿಂದ ಗ್ರಾಮೀಣ ರಸ್ತೆಗಳ ನಿರ್ವಹಣೆ, ಗುಂಡಿಗಳ ದುರಸ್ತಿ, ಅಪಾಯಕಾರಿ ತಿರುವುಗಳಲ್ಲಿ ಸುರಕ್ಷತಾ ಕ್ರಮಗಳು ಮತ್ತು ಅಗತ್ಯವಿರುವ ಕಡೆ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ನಗರದ ರಸ್ತೆಗಳಲ್ಲಾಗಲಿ, ಹಳ್ಳಿಯ ರಸ್ತೆಗಳಲ್ಲಾಗಲಿ ಪ್ರಯಾಣಿಸುವ ಜನರ ಅಗತ್ಯಗಳು ನಿಜವಾದವು. ಅವರ ಪ್ರಯಾಣ ಸುಗಮವಾಗಿರುವುದು ಕೂಡ ಅಷ್ಟೇ ಮುಖ್ಯ. ರಸ್ತೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ನೋಡಲಾಗದು. ಸುರಕ್ಷಿತ ಬಸ್ ಸೇವೆಗೆ ಸುರಕ್ಷಿತ ರಸ್ತೆ ಕೂಡ ಅಗತ್ಯ.
ಸಮಯಪಾಲನೆಯೂ ಸಾರಿಗೆ ಸೇವೆಯ ಒಂದು ಭಾಗ..? ಸಾರ್ವಜನಿಕ ಸಾರಿಗೆಯ ಗುಣಮಟ್ಟವನ್ನು ಕೇವಲ ಬಸ್ನ ಸ್ಥಿತಿ ಅಥವಾ ಸೀಟುಗಳ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಬಸ್ ಸಮಯಕ್ಕೆ ಬರುತ್ತದೆಯೇ, ನಿಯಮಿತವಾಗಿ ಸಂಚರಿಸುತ್ತದೆಯೇ ಮತ್ತು ಅಗತ್ಯವಿರುವ ಜನರಿಗೆ ಸರಿಯಾದ ಸಮಯದಲ್ಲಿ ಸೇವೆ ದೊರೆಯುತ್ತದೆಯೇ ಎಂಬುದೂ ಮುಖ್ಯ.
ಬಸ್ ತಡವಾದರೆ ವಿದ್ಯಾರ್ಥಿಗಳಿಗೆ ತರಗತಿ ತಪ್ಪಬಹುದು, ಉದ್ಯೋಗಿಗಳಿಗೆ ಕೆಲಸದ ಸಮಯದ ಮೇಲೆ ಪರಿಣಾಮ ಬೀಳಬಹುದು, ಕಾರ್ಮಿಕರಿಗೆ ದಿನದ ಕೂಲಿ ಅಥವಾ ಕೆಲಸದ ಅವಕಾಶಕ್ಕೆ ತೊಂದರೆಯಾಗಬಹುದು. ತುರ್ತು ಅಗತ್ಯಕ್ಕಾಗಿ ಪ್ರಯಾಣಿಸುವವರಿಗೆ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಚಾರದ ಅವಧಿ ಕಡಿಮೆಯಿದ್ದರೆ, ಒಂದು ಬಸ್ನ ಸಮಯ ಬದಲಾಗುವುದೇ ಜನರ ದಿನಚರಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ಸಮಯಪಾಲನೆಯೂ ಸಾರ್ವಜನಿಕ ಸಾರಿಗೆಯ ಜವಾಬ್ದಾರಿಯ ಒಂದು ಪ್ರಮುಖ ಭಾಗವಾಗಿದೆ.
ಪರಿಹಾರ ಸಮಸ್ಯೆಗಿಂತ ದೊಡ್ಡದಾಗಬೇಕು..? ಸಮಸ್ಯೆಗಳನ್ನು ಗುರುತಿಸುವುದಷ್ಟೇ ಸಾಕಾಗುವುದಿಲ್ಲ; ಅವುಗಳಿಗೆ ಸ್ಥಳೀಯ ಅಗತ್ಯಕ್ಕೆ ತಕ್ಕ ಪರಿಹಾರ ಹುಡುಕಬೇಕು. ಶಾಲಾ-ಕಾಲೇಜುಗಳು ಪ್ರಾರಂಭವಾಗುವ ಮತ್ತು ಮುಗಿಯುವ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಮಾರ್ಗಗಳನ್ನು ಗುರುತಿಸಿ, ಅಗತ್ಯವಿದ್ದಲ್ಲಿ ಹೆಚ್ಚುವರಿ ಬಸ್ಗಳು ಅಥವಾ ಹೆಚ್ಚುವರಿ ಸುತ್ತುಗಳನ್ನು ಒದಗಿಸಬಹುದು.
ಗ್ರಾಮೀಣ ಮಾರ್ಗಗಳಲ್ಲಿ ಯಾವ ಸಮಯದಲ್ಲಿ ಹೆಚ್ಚು ಜನರು ಪ್ರಯಾಣಿಸುತ್ತಾರೆ, ಯಾವ ಮಾರ್ಗದಲ್ಲಿ ಬಸ್ಗಳ ಕೊರತೆ ಇದೆ, ಯಾವ ಸ್ಥಳಗಳಲ್ಲಿ ರಸ್ತೆ ಅಪಾಯಕಾರಿ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅದರ ಆಧಾರದ ಮೇಲೆ ಸೇವೆಯನ್ನು ಸುಧಾರಿಸಬಹುದು.
ನಗರಗಳಲ್ಲಿ ಜನದಟ್ಟಣೆ ಹೆಚ್ಚಿರುವ ಮಾರ್ಗಗಳಲ್ಲಿ ಬಸ್ಗಳ ಸಂಚಾರದ ಅವಧಿ ಹೆಚ್ಚಿಸುವುದು, ಅಗತ್ಯವಿರುವ ಸಮಯದಲ್ಲಿ ಹೆಚ್ಚುವರಿ ಬಸ್ಗಳನ್ನು ಒದಗಿಸುವುದು ಮತ್ತು ಮಾರ್ಗವಾರು ಪ್ರಯಾಣಿಕರ ಬೇಡಿಕೆಯನ್ನು ಗಮನಿಸುವುದು ಸಹಾಯಕವಾಗಬಹುದು.
ಅದೇ ರೀತಿ ಗ್ರಾಮೀಣ ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆಗೆ ನಿರಂತರ ಗಮನ ನೀಡಬೇಕು. ಮಳೆ ಬಂದಾಗ ಮಾತ್ರ ದುರಸ್ತಿ ಮಾಡುವ ಬದಲು, ರಸ್ತೆ ಗುಣಮಟ್ಟವನ್ನು ಕಾಪಾಡುವ ಶಾಶ್ವತ ಕ್ರಮಗಳ ಅಗತ್ಯವಿದೆ. ಪ್ರತಿಯೊಂದು ಪ್ರದೇಶದ ಅಗತ್ಯವೂ ಒಂದೇ ರೀತಿಯಾಗಿರುವುದಿಲ್ಲ. ಆದ್ದರಿಂದ ಪ್ರಯಾಣಿಕರ ಸಂಖ್ಯೆ, ಪ್ರಯಾಣದ ಸಮಯ ಮತ್ತು ಸ್ಥಳೀಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರಗಳನ್ನು ರೂಪಿಸುವುದು ಹೆಚ್ಚು ಪರಿಣಾಮಕಾರಿ.
ಇದು ಯಾರ ಜವಾಬ್ದಾರಿ..? ಸಾರ್ವಜನಿಕ ಸಾರಿಗೆಯ ಸುರಕ್ಷತೆ ಮತ್ತು ಗುಣಮಟ್ಟ ಕೇವಲ ಸರ್ಕಾರದ ಜವಾಬ್ದಾರಿ ಎಂದು ಹೇಳಿ ಮುಗಿಸಲು ಸಾಧ್ಯವಿಲ್ಲ. ಸಾರಿಗೆ ಸಂಸ್ಥೆಗಳು, ಸ್ಥಳೀಯ ಆಡಳಿತ, ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರು—ಎಲ್ಲರಿಗೂ ತಮ್ಮದೇ ಆದ ಜವಾಬ್ದಾರಿ ಇದೆ. ಸರ್ಕಾರ ಮತ್ತು ಸಾರಿಗೆ ಸಂಸ್ಥೆಗಳು ಜನರ ಅಗತ್ಯಕ್ಕೆ ತಕ್ಕಂತೆ ಬಸ್ ಸೇವೆಯನ್ನು ರೂಪಿಸಬೇಕು. ಅಗತ್ಯವಿರುವ ಮಾರ್ಗಗಳಲ್ಲಿ ಬಸ್ಗಳ ಸಂಖ್ಯೆ ಹೆಚ್ಚಿಸುವುದು, ಸಮಯಪಾಲನೆ ಕಾಪಾಡುವುದು ಮತ್ತು ವಾಹನಗಳ ನಿರ್ವಹಣೆಗೆ ಗಮನ ನೀಡಬೇಕು.
ಸ್ಥಳೀಯ ಆಡಳಿತವು ರಸ್ತೆ ಸಮಸ್ಯೆಗಳನ್ನು ಗುರುತಿಸಿ, ದುರಸ್ತಿ ಮತ್ತು ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರೂ ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಬಸ್ ತುಂಬಿರುವಾಗ ಬಾಗಿಲಿನ ಬಳಿ ನಿಂತು ಅಪಾಯಕ್ಕೆ ಒಳಗಾಗದಿರುವುದು, ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಮತ್ತು ಸಮಸ್ಯೆಗಳಿದ್ದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದು ಮುಖ್ಯ.
ಜನರು ಸಮಸ್ಯೆಗಳನ್ನು ಕೇವಲ ಮಾತನಾಡುವುದಕ್ಕಿಂತ, ಯಾವ ಮಾರ್ಗದಲ್ಲಿ ಯಾವ ಸಮಯದಲ್ಲಿ ಸಮಸ್ಯೆ ಇದೆ, ಎಷ್ಟು ಜನರು ಪ್ರಯಾಣಿಸುತ್ತಾರೆ, ಎಷ್ಟು ಹೆಚ್ಚುವರಿ ಸುತ್ತುಗಳು ಅಗತ್ಯವಿದೆ ಎಂಬಂತಹ ಮಾಹಿತಿಯೊಂದಿಗೆ ಮನವಿ ಮಾಡಿದರೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಇದ್ದಾಗ ಸಾರ್ವಜನಿಕ ಸಾರಿಗೆಯ ಮೇಲಿನ ವಿಶ್ವಾಸವೂ ಹೆಚ್ಚುತ್ತದೆ.
ಬಸ್ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರ ಹಿಂದೆ ಒಂದು ಬದುಕಿದೆ..? ಬಸ್ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಕೇವಲ ಒಬ್ಬ ಪ್ರಯಾಣಿಕರಲ್ಲ..ಅವರ ಹಿಂದೆ ಒಂದು ಕುಟುಂಬ, ಒಂದು ಜವಾಬ್ದಾರಿ ಮತ್ತು ಒಂದು ಅಗತ್ಯವಿದೆ. ಅಲ್ಲಿ ಪರೀಕ್ಷೆಗೆ ಹೋಗುತ್ತಿರುವ ವಿದ್ಯಾರ್ಥಿಯಿರಬಹುದು. ಕೆಲಸಕ್ಕೆ ತಡವಾಗಬಾರದೆಂದು ಆತುರದಲ್ಲಿರುವ ಉದ್ಯೋಗಿಯಿರಬಹುದು. ದಿನದ ಕೂಲಿಗಾಗಿ ಪ್ರಯಾಣಿಸುವ ಕಾರ್ಮಿಕನಿರಬಹುದು. ಮಾರುಕಟ್ಟೆಗೆ ಹೋಗುತ್ತಿರುವ ರೈತನಿರಬಹುದು. ಆಸ್ಪತ್ರೆಗೆ ತೆರಳುತ್ತಿರುವ ವೃದ್ಧನಿರಬಹುದು. ತಮ್ಮ ಮಕ್ಕಳಿಗಾಗಿ, ಕುಟುಂಬಕ್ಕಾಗಿ ಅಥವಾ ತಮ್ಮದೇ ಅಗತ್ಯಕ್ಕಾಗಿ ಪ್ರಯಾಣಿಸುವ ಮಹಿಳೆಯಿರಬಹುದು.
