Majestic-Jantar Mantar: Exciting journey of Bengaluru youth participating in anti-SIR protest! –ಎಸ್ಐಆರ್ ರದ್ದು ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಸಿಜೆಪಿ ಮತ್ತು ವಿರೋಧ ಪಕ್ಷಗಳ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ದೇಶದ ವಿವಿಧ ರಾಜ್ಯಗಳಿಂದ ಯುವಕರು ತೆರಳಿದ್ದಾರೆ. ಇದೇ ಸಂದರ್ಭದಲ್ಲಿ ಮೆಜೆಸ್ಟಿಕ್ ಟು ಜಂತರ್ ಮಂತರ್ ಗೆ ಎಸ್ಐಆರ್ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳಿದ್ದ ಬೆಂಗಳೂರು ಮೂಲದ ಯುವಕರ ರೋಚಕ ಪಯಣ ಕುತೂಹಲಕ್ಕೆ ಕಾರಣವಾಗಿದೆ. ಹೇಗಿತ್ತು ಈ ರೋಚಕ ಪಯಣ? ಇಲ್ಲಿದೆ ಮಾಹಿತಿ.
- ಎಸ್ಐಆರ್ ರದ್ದು ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ.
- ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಲು ದೇಶದ ವಿವಿಧ ರಾಜ್ಯಗಳಿಂದ ಯುವಕರು ತೆರಳಿದ್ದಾರೆ.
- ದೆಹಲಿಗೆ ತೆರಳಿದ್ದ ಬೆಂಗಳೂರಿನ ಮೂವರು ಯುವಕರ ರೋಚಕ ಪಯಣ ಇಲ್ಲಿದೆ.
![]()
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಸ್ಐಆರ್ ರದ್ದು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ನಿರಂತರ ಹೋರಾಟಗಳು ನಡೆಯುತ್ತಿವೆ. ದೇಶದ ವಿವಿಧ ರಾಜ್ಯಗಳಿಂದ ಈ ಹೋರಾಟದಲ್ಲಿ ಭಾಗಿಯಾಗಲು ಯುವಕ-ಯುವತಿಯರು ತೆರಳಿದ್ದಾರೆ. ಪೊಲೀಸರ ಲಾಠಿ ಏಟು, ಬಂಧನ, ಘೋಷಣೆಗಳ ಮೂಲಕ ಜೆನ್ ಝಿ ಸಮೂಹ ಗಮನ ಸೆಳೆಯುತ್ತಿದೆ. ಅದರಲ್ಲೂ ದೂರದ ದೆಹಲಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳಿದ್ದ ಬೆಂಗಳೂರಿನ ಮೂವರು ಯುವಕರ ರೂಚಕ ಪಯಣ ಗಮನ ಸೆಳೆಯುವಂತಿದೆ.
ಅಂದ ಹಾಗೆ ಈ ಮೂವರು ಯುವಕರ ಹೆಸರು, ಮೊಹ್ಸಿನ್ ಖಾನ್, ರಾಜೇಶ್ ಮೋಹನ್ ಗೌಡ ಮತ್ತು ಬರ್ಕತ್ ಸೈಯದ್. ಇವರೆಲ್ಲಾ ಬೆಂಗಳೂರಿನ ನಿವಾಸಿಗಳು. ಈ ಮೂವರು ಸ್ನೇಹಿತರು ಎಸ್ಐಆರ್ ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದಿದ್ದ ಹೋರಾಟದಲ್ಲಿ ಭಾಗಿಯಾಗಲು ತೆರಳಿದ್ದರು. ಅಕ್ಟೋಬರ್ 10 ರಂದು ಸಿಜೆಪಿ ಕರೆ ಕೊಟ್ಟಿದ್ದ ಹೋರಾಟದಲ್ಲಿ ತಾವೂ ಭಾಗಿಯಾಗಬೇಕೆಂದು ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಹೊರಟಿದ್ದರು.
ಏನೆಲ್ಲಾ ಅಡ್ಡಿ ಆತಂಕ?
ಮೂವರು ಯುವಕರ ಬೆಂಗಳೂರು ಟು ದೆಹಲಿ ಪ್ರಯಾಣದ ಬಗ್ಗೆ ಬೆಂಗಳೂರಿನ ಕಲಾಸಿಪಾಳ್ಯದ ನಿವಾಸಿ, 21 ವರ್ಷದ ಮೊಹ್ಸಿನ್ ಖಾನ್ ಮಾತನಾಡುತ್ತಾ ತಮ್ಮ ರೋಚಕ ಅನುಭವದ ಬಗ್ಗೆ ಮಾಹಿತಿ ತೆರೆದಿಟ್ಟರು, “ ಎಸ್ಐಆರ್ ಪ್ರಕ್ರಿಯೆಯ ಕಾರಣದಿಂದಾಗಿ ಈ ಬಾರಿ ಮತದಾರರ ಪಟ್ಟಿಯಿಂದ ನನ್ನ ತಾಯಿಯ ಹೆಸರು ಕಣ್ಮರೆಯಾಗಿತ್ತು. ಹೆಸರು ಸೇರ್ಪಡೆಗೊಳಿಸಲು ತಾಯಿ ಅನಿವಾರ್ಯವಾಗಿ ತನ್ನೂರಿಗೆ ತೆರಳಬೇಕಾಗಿತ್ತು. ಇದು ನನ್ನಲ್ಲಿ ತೀವ್ರ ಆಕ್ರೋಶ ಮೂಡಿಸಿತ್ತು. ಹೀಗಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ ನೇತೃತ್ವದ ಎಸ್ಐಆರ್ ವಿರೋಧಿ ಚಳುವಳಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದೆ” ಎಂದು ವಿವರಿಸುತ್ತಾರೆ.
ರೈಲಿಗೆ ಪೊಲೀಸ್ ಪ್ರವೇಶ?
ತಮ್ಮ ದೆಹಲಿ ಜರ್ನಿಯ ಬಗ್ಗೆ ವಿವರಿಸಿದ ರಾಜೇಶ್ ಮೋಹನ್ ಗೌಡ “ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ನಾವು ಮಹಾರಾಷ್ಟ್ರದ ದೌಂಡ್ ಜಂಕ್ಷನ್ ತಲುಪುತ್ತಿದ್ದಂತೆ ಸಮವಸ್ತ್ರ ಮತ್ತು ಸಾದಾ ಉಡುಪಿನಲ್ಲಿದ್ದ ಪೊಲೀಸರು ರೈಲು ಬೋಗಿಯನ್ನು ಪ್ರವೇಶಿಸಿದರು. ಬಳಿಕ ಅಲ್ಲಿನ ವಾತಾವರಣ ಬದಲಾಯಿತು. ಪೊಲೀಸರು ನಮ್ಮ ಹೆಸರು ಹಾಗೂ ಇನ್ನಿತರ ಮಾಹಿತಿಗಳನ್ನು ಕೇಳಲು ಶುರುಮಾಡಿದರು. ಅಲ್ಲದೆ, ನಮ್ಮ ಅನುಮತಿಯಿಲ್ಲದೆ ಫೋಟೋಗಳನ್ನು ತೆಗೆದುಕೊಂಡರು ಮತ್ತು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಪ್ರಶ್ನಿಸಿದರು” ಎಂದರು.
ಪಟ್ಟು ಸಡಿಲಿಸದ ಯುವಕರು
ಬಂಧನಕ್ಕೊಳಗಾಗಿ ಸಮಸ್ಯೆಗಳನ್ನು ಅನುಭವಿಸಿದರೂ ಯುವಕರು ಎಸ್ಐಆರ್ ವಿರುದ್ದದ ಪ್ರತಿಭಟನೆಯಲ್ಲಿ ಭಾಗಿಯಾಗಲೇ ಬೇಕೆಂದು ನಿರ್ಧರಿಸಿದರು. ಆದರೆ, ಅಕ್ಟೋಬರ್ 10 ರಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಈ ಮೂವರಿಗೆ ಸಾಧ್ಯವಾಗಿಲ್ಲ. ಭಾರಿ ಪೊಲೀಸ್ ಬಂದೋಬಸ್ತ್ನಿಂದಾಗಿ ಜಂತರ್ ಮಂತರ್ ತಲುಪಲು ಅಸಾಧ್ಯವಾಯಿತು.
ಮತ್ತೆ ಪೊಲೀಸ್ ವಶಕ್ಕೆ!
ಅಕ್ಟೋಬರ್ 11 ರಂದು ಮತ್ತೊಮ್ಮೆ ಇವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಹೋರಾಟದಲ್ಲಿ ಭಾಗಿಯಾಗಲು ಮುಂದಾದರು. ಆದರೆ, ಈ ವೇಳೆ ಬರ್ಕತ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಬಂಧಿತರನ್ನು ಸುಮಾರು 40-45 ಕಿ.ಮೀ ದೂರದಲ್ಲಿರುವ ದೆಹಲಿ-ಹರಿಯಾಣ ಗಡಿಯತ್ತ ಕರೆದೊಯ್ಯಲಾಗಿತ್ತು. ಅಷ್ಟೇ ಅಲ್ಲದೆ, ಇವರ ಫೋನ್ ಕಸಿದುಕೊಳ್ಳಲು ಯತ್ನಿಸಲಾಗಿತ್ತಂತೆ. ಬರ್ಕತ್ ತಡರಾತ್ರಿಯವರೆಗೂ ಪೊಲೀಸ್ ವಶದಲ್ಲೇ ಇದ್ದು, ರಾತ್ರಿ 11.30 ರ ಸುಮಾರಿಗೆ ಮತ್ತೆ ಸ್ನೇಹಿತರನ್ನು ಸೇರಿಕೊಂಡರು.
ಬಳಿಕ ಸಿಜೆಪಿ ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರೊಂದಿಗೆ ಸೇರಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಈ ಮೂವರು ಸ್ನೇಹಿತರು ಭಾಗಿಯಾದರು.
ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವ ವರೆಗೆ ವಾಪಸ್ ಆಗಲ್ಲ!
ಸದ್ಯ ದೆಹಲಿಯಲ್ಲೇ ಬೀಡು ಬಿಟ್ಟಿರುವ ಈ ಮೂವರು ಯುವಕರು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿದ ನಂತರವೇ ಬೆಂಗಳೂರಿಗೆ ಹಿಂತಿರುಗುವುದಾಗಿ ಸ್ಪಷ್ಟಪಡಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಯ ಕುರಿತು ತನಿಖೆ ನಡೆಸಲು ಸ್ವತಂತ್ರ ಸಮಿತಿಯನ್ನು ರಚಿಸಬೇಕು ಮತ್ತು ಸಮಸ್ಯೆಗಳು ಬಗೆಹರಿಯುವವರೆಗೆ ಜನವರಿ 2025 ಕ್ಕಿಂತ ಮೊದಲು ಇದ್ದ ಮತದಾರರ ಪಟ್ಟಿಯನ್ನೇ ಮರುಸ್ಥಾಪಿಸಬೇಕು ಎಂಬುವುದು ಇವರ ಆಗ್ರಹವಾಗಿದೆ.
