Renuka swamy murder: Vinay suddenly withdraws his pardon application! Court summons 2 eye witnesses..? –ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. 10ನೇ ಆರೋಪಿ ವಿನಯ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಯನ್ನು ದಿಢೀರನೆ ಹಿಂಪಡೆದಿದ್ದು, ಪ್ರಕರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮತ್ತೊಂದೆಡೆ, ಆರೋಪಿಗಳಾದ ಅನುಕುಮಾರ್ ಹಾಗೂ ಜಗದೀಶ್ ಅವರ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್, ಆದೇಶವನ್ನು ಅಕ್ಟೋಬರ್ 17ಕ್ಕೆ ಕಾಯ್ದಿರಿಸಿದೆ. ಈ ಬೆಳವಣಿಗೆಗಳು ನಟ ದರ್ಶನ್ ಕಾನೂನು ಹೋರಾಟದ ಮೇಲೆ ಬೀರಲಿರುವ ಪರಿಣಾಮದ ಬಗ್ಗೆ ಚರ್ಚೆ ಶುರುವಾಗಿದೆ.
- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆ.
- ಪ್ರಕರಣದ 10ನೇ ಆರೋಪಿಯಾಗಿರುವ ವಿನಯ್ ಮಾಫಿ ಸಾಕ್ಷಿ ವಾಪಸ್.
- ನಿರ್ಧಾರವು ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯಲ್ಲಿ ಭಾರೀ ಕುತೂಹಲಕ್ಕೆ ಕಾರಣ.
![]()
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಪ್ರಕರಣದಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ಸಿಕ್ಕಿದೆ. ಪ್ರಕರಣದ 10ನೇ ಆರೋಪಿಯಾಗಿರುವ ವಿನಯ್, ತಾನು ‘ಮಾಫಿ ಸಾಕ್ಷಿ’ಯಾಗುವುದಾಗಿ ಸಲ್ಲಿಸಿದ್ದ ಅರ್ಜಿಯನ್ನು ದಿಢೀರನೆ ವಾಪಸ್ ಪಡೆದಿದ್ದಾರೆ. ಆರೋಪಿಯ ಈ ನಿರ್ಧಾರವು ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಗೆ ಮುಂದಾಗಿದ್ದರು. ಇದರ ಬೆನ್ನಲ್ಲೇ, ತನಿಖೆಗೆ ಸಹಕರಿಸಿ ಸರ್ಕಾರದ ಪರ ಸಾಕ್ಷ್ಯ ನುಡಿಯಲು ಸಿದ್ಧವಿರುವುದಾಗಿ ವಿನಯ್ ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದು ನಟ ದರ್ಶನ್ ಸೇರಿದಂತೆ ಇತರ ಪ್ರಮುಖ ಆರೋಪಿಗಳಿಗೆ ಸಂಕಷ್ಟ ತರಬಹುದು ಎಂದೇ ಭಾವಿಸಲಾಗಿತ್ತು. ಆದರೆ, ಇದೀಗ ಯಾವುದೇ ಸ್ಪಷ್ಟ ಕಾರಣಗಳನ್ನು ಬಹಿರಂಗಪಡಿಸದೆ ವಿನಯ್ ತಮ್ಮ ಅರ್ಜಿಯನ್ನು ಹಿಂಪಡೆದಿದ್ದು, ಈ ದಿಢೀರ್ ಬದಲಾವಣೆಯ ಹಿಂದಿನ ಮರ್ಮವೇನು ಎಂಬುದು ನಿಗೂಢವಾಗಿದೆ.
ಪ್ರತ್ಯಕ್ಷ ಸಾಕ್ಷಿಗಳಿಗೆ ಸಮನ್ಸ್ ಜಾರಿ : ಪ್ರಕರಣದ ಆರೋಪಿ ಪ್ರದೂಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಪೂರ್ಣಗೊಂಡಿದೆ. ಈ ನಡುವೆ, ಪ್ರಕರಣದ ವಿಚಾರಣೆ ತ್ವರಿತಗೊಳಿಸಿರುವ ನ್ಯಾಯಾಲಯ, ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿಗೆ ಅ.27, 28 ರಂದು ವಿಚಾರಣೆಗೆ ಆಗಮಿಸುವಂತೆ ಸಮನ್ಸ್ ಜಾರಿಗೊಳಿಸಿದೆ. ಕೃತ್ಯ ನಡೆದ ಪಟ್ಟಣಗೆರೆ ಶೆಡ್ ನ ಸೆಕ್ಯೂರಿಟಿ ಗಾರ್ಡ್ ಗಳು ಪ್ರಕರಣದ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ.
ಇಬ್ಬರು ಆರೋಪಿಗಳ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್: ಇನ್ನೊಂದೆಡೆ, ಇದೇ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆ ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪೂರ್ಣಗೊಂಡಿದೆ. ಉಭಯ ಪರ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಜಾಮೀನು ಅರ್ಜಿಯ ಮೇಲಿನ ತೀರ್ಪನ್ನು ಅಕ್ಟೋಬರ್ 17ಕ್ಕೆ ಕಾಯ್ದಿರಿಸಿದ್ದಾರೆ.
ದರ್ಶನ್ಗೆ ಲಾಭವಾಗಲಿದೆಯೇ? ಆರೋಪಿ ವಿನಯ್ ಮಾಫಿ ಸಾಕ್ಷಿ ಅರ್ಜಿಯನ್ನು ಹಿಂಪಡೆದಿರುವುದು ಸದ್ಯ ತನಿಖಾಧಿಕಾರಿಗಳು ಹಾಗೂ ವಕೀಲರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿನಯ್ ಅವರ ಈ ನಿರ್ಧಾರದಿಂದ ನಟ ದರ್ಶನ್ಗೆ ಕಾನೂನು ಹೋರಾಟದಲ್ಲಿ ಏನಾದರೂ ಪೂರಕ ವಾತಾವರಣ ನಿರ್ಮಾಣವಾಗಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ. ಪ್ರಕರಣದ ಮುಂದಿನ ವಿಚಾರಣೆ ಮತ್ತು ಸಾಕ್ಷ್ಯಾಧಾರಗಳ ಮಂಡನೆಯೇ ಎಲ್ಲರ ಭವಿಷ್ಯವನ್ನು ನಿರ್ಧರಿಸಲಿದೆ.
ಇಬ್ಬರು ನಟರು ಹೇಳಿಕೆ ದಾಖಲು? ನಟ ದರ್ಶನ್ ಪರಿಚಯ ಹಾಗೂ ಸ್ಟೋನಿ ಬ್ರೂಕ್ ಪಬ್ನಲ್ಲಿಇದ್ದುದರ ಬಗ್ಗೆ ನಟ ಚಿಕ್ಕಣ್ಣ ಹೇಳಿಕೆ ದಾಖಲಿಸಿದ್ದಾರೆ. ಈ ನಡುವೆ, ನಟ ಯಶಸ್ ಸೂರ್ಯ, ‘‘ದರ್ಶನ್ ಕರೆ ಮೇರೆಗೆ ಸ್ಟೋನಿ ಬ್ರೂಕ್ ಪಬ್ನ ಎರಡನೇ ಮಹಡಿಯಲ್ಲಿಊಟ ಮಾಡಲು ಸುಮಾರು 1 ಗಂಟೆಗೆ ಹೋಗಿದ್ದೆ. ಅರ್ಧ ಗಂಟೆ ಬಳಿಕ ದರ್ಶನ್ ಬಂದರು. ಜೊತೆಯಲ್ಲಿ ಪ್ರದೂಷ್, ನಾಗರಾಜ್, ವಿನಯ್ ಇದ್ದರು. ಮಧ್ಯಾಹ್ನ ಮೂರೂವರೆವರೆಗೂ ಅಲ್ಲೇ ಇದ್ದೆವು. ಈ ವೇಳೆ ಸಿನಿಮಾಗಳ ಬಗ್ಗೆ ಮಾತನಾಡಿದೆವು. ನಂತರ ಮನೆಗೆ ತೆರಳಿದೆವು. ಪೊಲೀಸ್ ವಿಚಾರಣೆಯಲ್ಲಿ ಕೂಡ ಇದೇ ವಿಚಾರ ಹೇಳಿದ್ದೆ. ಈ ಹಿಂದೆ ಕೋರ್ಟ್ ಮುಂದೆಯೂ ಇದೇ ಹೇಳಿಕೆ ನೀಡಿದ್ದೆ,’’ ಎಂದು ವಿವರಿಸಿದರು.
‘‘ಪಬ್ಗೆ ಆರೋಪಿ ಪವನ್ ಬಂದಿರುವ ಬಗ್ಗೆ ಗೊತ್ತಿರಲಿಲ್ಲ. ಪವನ್ ಬಂದಿದ್ದ ಎಂದು ಹೇಳುವಂತೆ ಪೊಲೀಸರು ಹೇಳಿದ್ದರು. ನಾನು ಬೇರೊಂದು ಕರೆಯಲ್ಲಿ ಪಬ್ನಿಂದ ಹೊರಗಿದ್ದಾಗ ಪವನ್ ಬಂದಿದ್ದ. ಅದು ನನಗೆ ಗೊತ್ತಿರಲಿಲ್ಲ,’’ ಎಂದರು. ಈ ವೇಳೆ ಎಸ್ಪಿಪಿ ಪ್ರಸನ್ನಕುಮಾರ್, ‘‘ಯಶಸ್ ಸೂರ್ಯ ಅವರನ್ನು ಭಾಗಶಃ ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಬೇಕು,’’ ಎಂದು ಮನವಿ ಮಾಡಿದರು. ಅದನ್ನು ನ್ಯಾಯಾಲಯ ಪರಿಗಣಿಸಿತು.
