‘Project Panchatantra’ drama performance on October 18 in Mangalore: –ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ರಂಗಾಸಕ್ತರಿಗೆ ಮತ್ತೊಂದು ಮಹತ್ವದ ನಾಟಕ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಒದಗಿಬಂದಿದೆ.
ಕೇರಳದ ಪ್ರಸಿದ್ಧ ರಂಗ ನಿರ್ದೇಶಕ ಅರುಣ್ ಲಾಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ, ಪಂಚತಂತ್ರದ ಕಥೆಗಳನ್ನು ಆಧರಿಸಿದ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕವು ಅಕ್ಟೋಬರ್ 18ರ ಭಾನುವಾರ ಸಂಜೆ 6.30 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಸಹೋದಯ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.

ಕೇರಳದ ರಂಗಭೂಮಿಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಅರುಣ್ ಲಾಲ್ ಅವರು ‘ಕೂಹೂ‘, ‘ಕೆಂಡೋನಿಯನ್ಸ್‘, ‘ಮತ್ತಾಯ‘ ಮುಂತಾದ ಯಶಸ್ವಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಪಂಚತಂತ್ರದ ಕಥೆಗಳ ಆಶಯ ಮತ್ತು ಸತ್ವವನ್ನು ಆಧರಿಸಿದ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಹಾಗೂ ಚಿಂತನೆಗೆ ಹಚ್ಚಲು ಸಜ್ಜಾಗಿದ್ದಾರೆ.
ಭಾರತೀಯ ಕಥನ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಪಂಚತಂತ್ರದ ಕಥೆಗಳು ಜ್ಞಾನ, ಜೀವನಾನುಭವ, ಬುದ್ಧಿವಂತಿಕೆ ಮತ್ತು ಮಾನವ ಸ್ವಭಾವದ ವಿವಿಧ ಆಯಾಮಗಳನ್ನು ಪರಿಚಯಿಸುತ್ತವೆ. ಈ ಕಥೆಗಳನ್ನು ಸಮಕಾಲೀನ ರಂಗಭೂಮಿಯ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸುವ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕವು ರಂಗಾಸಕ್ತರಲ್ಲಿ ಕುತೂಹಲ ಮೂಡಿಸಿದೆ.
ಮೈಸೂರಿನ ನಿರ್ದಿಗಂತ ಸಂಸ್ಥೆಯ ಪ್ರಸ್ತುತಿಯಲ್ಲಿ ಮೂಡಿಬರುತ್ತಿರುವ ಈ ನಾಟಕವನ್ನು ಸಂತ ಅಲೋಶಿಯಸ್, ಮಂಗಳೂರಿನ ರಂಗ ಅಧ್ಯಯನ ಕೇಂದ್ರ ಆಯೋಜಿಸಿದೆ. ಮಂಗಳೂರಿನ ಕಲಾಪ್ರೇಮಿಗಳು, ರಂಗಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ನಾಟಕ ಪ್ರದರ್ಶನದ ಸವಿಯನ್ನು ಆಸ್ವಾದಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.
