Letter from two Election Commissioners to Cabinet Secretary in place of Gnanesh Kumar: What is this phenomenon? – ECI Commissioner Letter To Cabinet Secretary- ಭಾರತೀಯ ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಜುಲೈ 29ರಂದು ಕೇಂದ್ರ ಸಂಪುಟ ಕಾರ್ಯದರ್ಶಿಗೆ ಬರೆದಿದ್ದ ಪತ್ರದ ಕುರಿತು ಆರ್ಟಿಐ ಮೂಲಕ ಅಧಿಕೃತ ಮಾಹಿತಿ ಲಭ್ಯವಾಗಿದೆ. ಕೆಲಸದ ಹಂಚಿಕೆ ಆದೇಶದ ವಿವಾದದ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿತ್ತು. ಸಂಪುಟ ಸಚಿವಾಲಯವು ಈ ಪತ್ರಗಳನ್ನು ಸಿಇಸಿ ಕಚೇರಿ ಹಾಗೂ ಡಿಒಪಿಟಿಗೆ ರವಾನಿಸಿದ್ದು, 14 ಪುಟಗಳ ಅಧಿಕೃತ ದಾಖಲೆಗಳು ಸದ್ಯದಲ್ಲೇ ಬಹಿರಂಗಗೊಳ್ಳಲಿವೆ. ಇದರಿಂದ ಮಾಧ್ಯಮಗಳಲ್ಲಿದ್ದ ವಿವಾದದ ವರದಿಗಳಿಗೆ ಪ್ರಥಮ ಬಾರಿಗೆ ಅಧಿಕೃತ ಸಾಕ್ಷ್ಯ ಸಿಕ್ಕಂತಾಗಿದೆ.
- ಕ್ಯಾಬಿನೆಟ್ ಕಾರ್ಯದರ್ಶಿಗೆ ಪತ್ರ ಬರೆದ ಇಬ್ಬರು ಆಯುಕ್ತರ ನಡೆಗೆ ಆರ್ ಟಿಐ ಮೂಲಕ ದೃಢೀಕರಣ.
- ಮುಖ್ಯ ಚುನಾವಣಾ ಆಯುಕ್ತರನ್ನು ಬಿಟ್ಟು ಸಂಪುಟ ಕಾರ್ಯದರ್ಶಿಗೆ ಬರೆದದ್ದೇಕೆ ಎಂಬುದೇ ಪ್ರಶ್ನೆ.
- ‘ಸೇವಾ ತೀರ್ಥ’ ತಲುಪಿದ್ದ ಆಯುಕ್ತರ 14 ಪುಟಗಳ ಪತ್ರ ಸದ್ಯದಲ್ಲೇ ಬಹಿರಂಗ.

ಹೊಸದಿಲ್ಲಿ: ಜುಲೈ 29 ರಂದು, ಭಾರತದ ಮೂವರು ಚುನಾವಣಾ ಆಯುಕ್ತರ ಪೈಕಿ ಇಬ್ಬರು ಅಸಾಮಾನ್ಯವಾದ ಕೆಲಸವೊಂದನ್ನು ಮಾಡಿದರು. ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆಯುವ ಬದಲು, ಕ್ಯಾಬಿನೆಟ್ ಕಾರ್ಯದರ್ಶಿಗೆ ಪತ್ರ ಬರೆದಿರುವ ಬಗ್ಗೆ ಇದೀಗ ವರದಿಯಾಗಿದ್ದ ಚರ್ಚೆಗೆ ಕಾರಣವಾಗಿದೆ.
‘ ಮಾಹಿತಿ ಹಕ್ಕು ಕಾಯ್ದೆ ‘ ಅಡಿಯ ಪ್ರತಿಕ್ರಿಯೆಯೊಂದು, ಪ್ರಧಾನ ಮಂತ್ರಿ ಕಾರ್ಯಾಲಯ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಕ್ಯಾಬಿನೆಟ್ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ ತೀರ್ಥ’ ಸಂಕೀರ್ಣದಲ್ಲಿ ಆ ಪತ್ರಗಳಿಗೆ ಏನಾಯಿತು ಎಂಬುದನ್ನು ಬಹಿರಂಗಪಡಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಅಕ್ಟೋಬರ್ 19 ರಂದು ಬಂದ ಈ ಪ್ರತಿಕ್ರಿಯೆಯು, ಸೆಪ್ಟೆಂಬರ್ 24 ರಂದು ಸಲ್ಲಿಸಲಾದ ಆರ್ಟಿಐ ಅರ್ಜಿಗೆ ನೀಡಲಾದ ಉತ್ತರವಾಗಿದೆ. ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರಿಂದ ಬಂದ, ಜುಲೈ 29 ದಿನಾಂಕದ ಆ ಪತ್ರಗಳು ಕ್ಯಾಬಿನೆಟ್ ಸಚಿವಾಲಯವನ್ನು ತಲುಪಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದಾಖಲೆಗಳ ಹಾದಿ : ಈ ಎರಡು ಪತ್ರಗಳನ್ನು ಜುಲೈ 30 ರಂದು ದಾಖಲಿಸಿಕೊಳ್ಳಲಾಯಿತು. ಆಗಸ್ಟ್ 5 ರೊಳಗೆ, ಕ್ಯಾಬಿನೆಟ್ ಕಾರ್ಯದರ್ಶಿಯು ಅವುಗಳನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ರವಾನಿಸಿದರು. ಆದಾಗ್ಯೂ, ಆ ಪತ್ರಗಳಲ್ಲಿ ಏನಿದೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಆಯುಕ್ತರ 10 ಪುಟಗಳ ಪತ್ರಗಳು, ಎರಡು ಪುಟಗಳ ಪ್ರತಿಕ್ರಿಯೆಗಳು ಮತ್ತು ಎರಡು ಪುಟಗಳ ಕಡತದ ಟಿಪ್ಪಣಿಗಳನ್ನು ಒಳಗೊಂಡ ಒಟ್ಟು 14 ಪುಟಗಳ ದಾಖಲೆಗಳನ್ನು, 28 ರೂಪಾಯಿಗಳ ಶುಲ್ಕ ಪಾವತಿಸುವವರೆಗೆ ಸಚಿವಾಲಯವು ಬಿಡುಗಡೆ ಮಾಡಿಲ್ಲ.
ಚುನಾವಣಾ ಆಯುಕ್ತರು ಏಕೆ ಪತ್ರ ಬರೆದರು? – ಜುಲೈ 28 ರಂದು ಹೊರಡಿಸಲಾದ ‘ಕೆಲಸ ಹಂಚಿಕೆ ಆದೇಶ’ (work-allocation order) ಇದಕ್ಕೆ ಕಾರಣವಾಯಿತು. ಈ ಆದೇಶವನ್ನು ನಿಯಮಗಳ ಉಲ್ಲಂಘನೆ ಎಂದು ಆಕ್ಷೇಪಿಸಿ, ಇಬ್ಬರು ಆಯುಕ್ತರು ಕ್ಯಾಬಿನೆಟ್ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ನಂತರ, ಈ ಹೊಸ ಕೆಲಸ ಹಂಚಿಕೆ ಆದೇಶವನ್ನು ರದ್ದುಗೊಳಿಸಲಾಯಿತು.
ಚುನಾವಣಾ ಪಟ್ಟಿಗಳಿಗೆ ಸಂಬಂಧಿಸಿದ ಐಟಿ (IT) ವ್ಯವಸ್ಥೆಯ ಮೇಲಿನ ಮೇಲ್ವಿಚಾರಣಾ ಹಂತವೊಂದನ್ನು ಈ ಬದಲಾವಣೆಗಳು ಪರಿಣಾಮಕಾರಿಯಾಗಿ ತೆಗೆದುಹಾಕಿದ್ದವು ಎಂದು ಆ ಪತ್ರಿಕೆ ವರದಿ ಮಾಡಿದೆ. ತಮ್ಮ ಗಮನಕ್ಕೆ ಬಾರದೆ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದನ್ನು ಆಯುಕ್ತರು ಸ್ಪಷ್ಟಪಡಿಸಿದ್ದರು. ಈ ಕ್ರಮವನ್ನು “ಸಾಂಪ್ರದಾಯಿಕ ಪದ್ಧತಿಯಿಂದ ಸಂಪೂರ್ಣವಾಗಿ ಭಿನ್ನವಾದ ನಡೆ” ಎಂದು ಬಣ್ಣಿಸಲಾಗಿದೆ.
ಏತನ್ಮಧ್ಯೆ, ಈ ವಿಷಯದ ಬಗ್ಗೆ ಅರಿವುಳ್ಳ ವ್ಯಕ್ತಿಯೊಬ್ಬರನ್ನು ಉಲ್ಲೇಖಿಸಿ ಮತ್ತೊಂದು ಪತ್ರಿಕೆಯು ವರದಿ ಮಾಡಿದ್ದು, ಈ ಪತ್ರವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಸಂಬಂಧಿಸಿದ್ದಲ್ಲ, ಬದಲಾಗಿ ಹಿರಿಯ ಉಪ ಚುನಾವಣಾ ಆಯುಕ್ತರಿಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದೆ. ಸೆಪ್ಟೆಂಬರ್ 26 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಚುನಾವಣಾ ಆಯೋಗವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
“ಕ್ಯಾಬಿನೆಟ್ ಕಾರ್ಯದರ್ಶಿಗೆ ಬರೆದ ಪತ್ರವು ಆಯೋಗದ ಯಾವುದೇ ನೀತಿ ವಿಷಯಕ್ಕೆ ಅಥವಾ ಐಟಿ ವಿಭಾಗಕ್ಕೆ ಸಂಬಂಧಿಸಿದ್ದಲ್ಲ; ಬದಲಾಗಿ, ಚುನಾವಣಾ ಆಯೋಗಕ್ಕೆ ನಿಯೋಜನೆಯ ಮೇಲೆ ಬಂದಿರುವ ಅಧಿಕಾರಿಯೊಬ್ಬರ ಕಾರ್ಯನಿರ್ವಹಣೆಗೆ ಸಂಬಂಧಿಸಿದ್ದಾಗಿದೆ. ಸಂಬಂಧಪಟ್ಟ ಅಧಿಕಾರಿ ಹೊರಡಿಸಿದ ಕೆಲಸದ ಮರುಹಂಚಿಕೆ ಆದೇಶಗಳನ್ನು, ಇಬ್ಬರು ಆಯುಕ್ತರ ನಿರ್ದೇಶನದ ಮೇರೆಗೆ ವಾಸ್ತವವಾಗಿ ಜಾರಿಗೊಳಿಸಲಾಗಿಲ್ಲ. ಅಲ್ಲದೆ, ಐಟಿ ವಿಭಾಗದ ಮೇಲಿನ ಉಪ ಚುನಾವಣಾ ಆಯುಕ್ತರ ಮೇಲ್ವಿಚಾರಣಾ ಅಧಿಕಾರವನ್ನು ಎಂದಿಗೂ ಹಿಂಪಡೆದಿರಲಿಲ್ಲ” ಎಂದು ಆಯೋಗ ಮಾಹಿತಿ ನೀಡಿದೆ.
ಆರ್ಟಿಐ ಮೂಲದಿಂದ ಸ್ಪಷ್ಟವಾಗಿದ್ದೇನು? : ಪ್ರಸ್ತುತ ಲಭ್ಯವಾಗಿರುವ ಆರ್ಟಿಐ ಉತ್ತರವು ಆಯುಕ್ತರು ನಿಖರವಾಗಿ ಏನು ಬರೆದಿದ್ದರು ಅಥವಾ ಅವರ ದೂರು ಏನಾಗಿುತ್ತು ಎಂಬುದನ್ನು ಪೂರ್ಣವಾಗಿ ಬಹಿರಂಗಪಡಿಸಿಲ್ಲವಾದರೂ, ಈವರೆಗೂ ಮಾಧ್ಯಮ ವರದಿಗಳು ಮತ್ತು ಲೀಕ್ ಆದ ಮಾಹಿತಿಗಳನ್ನೇ ಆಧರಿಸಿದ್ದ ಈ ವಿವಾದಕ್ಕೆ ಪ್ರಥಮ ಬಾರಿಗೆ ಅಧಿಕೃತ ಸಾಕ್ಷ್ಯ ಸಿಕ್ಕಂತಾಗಿದೆ. ಪತ್ರಗಳು ಸಲ್ಲಿಕೆಯಾಗಿದ್ದು, ಸಂಪುಟ ಕಾರ್ಯದರ್ಶಿಯವರು ಅದನ್ನು ಪ್ರಕ್ರಿಯೆಗೆ ಒಳಪಡಿಸಿದ್ದು ಈಗ ಅಧಿಕೃತವಾಗಿ ದೃಢಪಟ್ಟಿದೆ. ಇದೀಗ ಆ ದಾಖಲೆಗಳನ್ನು ಪಡೆಯಲು ತಾನು ಸಿದ್ಧತೆ ನಡೆಸಿರುವುದಾಗಿ ‘ಇಂಡಿಯಾ ಟುಡೇ’ ತಿಳಿಸಿದೆ.
