3 ministers insulted during Mysore Dasara puja: JDS shares video; Dalits are getting royal treatment in Congress – ಮೈಸೂರು ದಸರಾ ಪೂಜೆ ವೇಳೆ ದಲಿತ ಸಚಿವರನ್ನು ಪೊಲೀಸರು ತಡೆದು ಅಪಮಾನಿಸಿರುವುದನ್ನು ಜೆಡಿಎಸ್ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ಪಕ್ಷವು ದಲಿತರನ್ನು ಕೇವಲ ಮತಬ್ಯಾಂಕ್ಗೆ ಮಾತ್ರ ಬಳಸಿಕೊಂಡು, ಅಧಿಕಾರ ಬಂದಾಗ ದ್ವೇಷ ಹಾಗೂ ಅಸ್ಪೃಶ್ಯತೆ ತೋರುತ್ತಿದೆ ಎಂದು ಆರೋಪಿಸಿದೆ. ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಸರ್ಕಾರದ ವಿರುದ್ಧ ಧ್ವನಿ ಎತ್ತಿ, ದಲಿತ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ಆಗ್ರಹಿಸಿದೆ.
- ದಸರಾ ಪೂಜೆ ವೇಳೆ ಮೂವರು ಸಚಿವರನ್ನು ತಡೆ ಹಿಡಿದ ಘಟನೆ.
- ಘಟನೆಯನ್ನು ಜೆಡಿಎಸ್ ಖಂಡಿಸಿದ್ದು, ಕಾಂಗ್ರೆಸ್ನಲ್ಲಿ ದಲಿತ ಸಚಿವರಿಗೆ ಸಿಗುತ್ತಿರುವ ರಾಜ ಮರ್ಯಾದೆ ಇದು ಎಂದು ಆಕ್ರೋಶ.
- ಸಚಿವರಾದ ಶಿವರಾಜ ತಂಗಡಗಿ, ಕೆ.ಎಸ್. ಬಸವಂತಪ್ಪ, ಪಿಎಂ ನರೇಂದ್ರ ಸ್ವಾಮಿ ಅವರನ್ನು ಪೂಜೆಗೆ ಬಿಡದೇ ತಡೆದಿದ್ದ ಪೊಲೀಸ್ ಅಧಿಕಾರಿ.
![]()
ಬೆಂಗಳೂರು: ಮೈಸೂರು ದಸರಾ ಪೂಜೆ ವೇಳೆ ಮೂವರು ಸಚಿವರನ್ನು ತಡೆ ಹಿಡಿದ ಘಟನೆಯನ್ನು ಜೆಡಿಎಸ್ ಖಂಡಿಸಿದ್ದು, ಕಾಂಗ್ರೆಸ್ನಲ್ಲಿ ದಲಿತ ಸಚಿವರಿಗೆ ಸಿಗುತ್ತಿರುವ ರಾಜ ಮರ್ಯಾದೆ ಇದು ಎಂದಿದೆ.
ಈ ಬಾರಿ ದಸರಾದಲ್ಲಿ ಪೊಲೀಸ್ ನಿರ್ವಹಣೆಯಲ್ಲಿ ಸಾಕಷ್ಟು ಲೋಪಗಳು ಕಂಡು ಬಂದಿವೆ. ಅರಮನೆ ಕೋಟೆ ಆಂಜನೆಯ ಸ್ವಾಮಿ ದೇವಸ್ಥಾನ ಬಳಿ ನಂದಿ ಧ್ವಜ ಪೂಜೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಮಾತ್ರ ಒಳಗೆ ಬಿಟ್ಟು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರನ್ನು ಪೊಲೀಸರು ತಡೆದರು. ಈ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿದ ತಂಗಡಗಿ ಆ ಅಧಿಕಾರಿಯತ್ತ ತಿರುಗಿ ಏನಿದು ಎಂದು ಪ್ರಶ್ನಿಸಿದರು.
ಅವರ ಜೊತೆ ಇದ್ದ ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ ಅವರನ್ನು ಕೈಯೊಡ್ಡಿ ಹಿಂದಕ್ಕೆ ತಳ್ಳಿದರು. ಈ ಸಂದರ್ಭ ಹಿಂದಕ್ಕೆ ತಿರುಗಿದ ಮುಖ್ಯಮಂತ್ರಿ ‘ಏ..’ ಎಂದು ಜೋರಾಗಿ ಆಕ್ಷೇಪಿಸಿ ಬಿಡುವಂತೆ ಸೂಚಿಸಿದರು. ಮತ್ತೆ ಕೃಷಿ ಸಚಿವ ನರೇಂದ್ರ ಸ್ವಾಮಿ ಅವರನ್ನು ತಡೆಯಲು ಬಂದಾಗ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದಕ್ಕೆ ಇಳಿದರು. ಅವರಷ್ಟೇ ಎತ್ತರದ ಧ್ವನಿಯಲ್ಲಿಆ ಅಧಿಕಾರಿ ಮರು ಪ್ರಶ್ನೆ ಹಾಕಿದರು.
ಮತಬ್ಯಾಂಕ್ಗೆ ಮಾತ್ರ ಬಳಸಿಕೊಂಡು ಅಧಿಕಾರಕ್ಕೆ ಬಂದಾಗ ಅಪಮಾನ – ಘಟನೆಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ” ದಲಿತರನ್ನು ಕೇವಲ ಮತಬ್ಯಾಂಕ್ಗೆ ಮಾತ್ರ ಬಳಸಿಕೊಂಡು, ಅಧಿಕಾರ ಬಂದಾಗ ಅಪಮಾನಿಸುವುದೇ ಕರ್ನಾಟಕ ಕಾಂಗ್ರೆಸ್ನ ಸಂಸ್ಕೃತಿ. ಮೈಸೂರು ದಸರಾ ಜಂಬೂಸವಾರಿ ವೇದಿಕೆಗೆ ತೆರಳುತ್ತಿದ್ದ ವೇಳೆ ದಲಿತ ಮಂತ್ರಿಗಳನ್ನು ತಡೆದು ಅಪಮಾನಿಸಿರುವುದು ಖಂಡನೀಯ. ಡಿಕೆ ಶಿವಕುಮಾರ್ ಅವರೇ , ನಿಮ್ಮ ಜೊತೆಯಲ್ಲೇ ಬಂದ ಸಂಪುಟದ ಸಹೋದ್ಯೋಗಿಗಳನ್ನು ವೇದಿಕೆಗೆ ಕರೆದೊಯ್ಯದೆ ಹಾಗೆಯೇ ಬಿಟ್ಟು ಹೋದದ್ದು ಯಾಕೆ? ಸ್ವತಃ ಸಚಿವರಿಗೇ ಈ ದುಸ್ಥಿತಿಯಾದರೆ ಇನ್ನು ನಿಮ್ಮ ಆಡಳಿತದಲ್ಲಿ ಸಾಮಾನ್ಯರ ಗತಿಯೇನು? ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಇದೇನಾ ನಿಮ್ಮ ಅಂಬೇಡ್ಕರ್ ವಾದ? ಇದೇನಾ ಅವರು ಬರೆದ ಸಂವಿಧಾನದ ಮೇಲಿರುವ ನಂಬಿಕೆ? ” ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
ಚಾಮುಂಡೇಶ್ವರಿ ಮೆರವಣಿಗೆಯಲ್ಲೆ ದಲಿತ ದ್ವೇಷ – “ನಾಚಿಕೆಯಾಗಬೇಕು ನಿಮಗೆ? ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ!! ಇಂಥ ದ್ವಂದ್ವದಿಂದ ಕರ್ನಾಟಕಕ್ಕೆ ಕಳಂಕ ತಂದಿದ್ದೀರಿ ನೀವು. ಅಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸಿ, ಅಪಮಾನಿಸಿ, ಚುನಾವಣಾ ಕಣದಲ್ಲಿ ನಾಲ್ಕು ಬಾರಿ ಸೋಲಿಸಿ, ಚುನಾವಣಾ ಕಣದಿಂದಲೇ ಹತ್ತಿಕ್ಕಿ ದಲಿತಜ್ಯೋತಿಯನ್ನು ನಂದಿಸಿದ ಕಾಂಗ್ರೆಸ್, ಮುಕ್ಕಾಲು ಶತಮಾನದ ನಂತರವೂ ಅದನ್ನು ನಿಷ್ಠೆಯಿಂದ ಪಾಲಿಸುತ್ತಿದೆ. ಚಾಮುಂಡೇಶ್ವರಿ ಅಮ್ಮನ ಮೆರವಣಿಗೆಯಲ್ಲಿ ದಲಿತ ದ್ವೇಷವನ್ನು ಆಚರಿಸಿದ್ದು ಸಾಕ್ಷಾತ್ ಆ ತಾಯಿಯೇ ನಿಮ್ಮನ್ನು ಕ್ಷಮಿಸುವುದಿಲ್ಲ. ತಪ್ಪು ಮಾಡಿದ್ದೀರಿ, ಮುಂದೆ ಅನುಭವಿಸುತ್ತೀರಿ ” ಜೆಡಿಎಸ್ ಆಕ್ರೋಶ ಹೊರ ಹಾಕಿದೆ.
ಮುಂದುವರೆದು ” ನಮ್ಮ ಒತ್ತಾಯ ಇಷ್ಟೇ, ಸಂಪುಟದಲ್ಲಿರುವ ಎಲ್ಲಾ ದಲಿತ ಸಚಿವರು ಮುಖ್ಯಮಂತ್ರಿ ಹಾಗೂ ಅವರ ಅಧಿಕಾರಿಗಳು ವರ್ತಿಸಿದ ರೀತಿಯನ್ನು ಖಂಡಿಸಬೇಕು. ಅಷ್ಟೇ ಅಲ್ಲ, ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದ ಇಂತಹ ವ್ಯಕ್ತಿ ಕೈಕೆಳಗೆ ಕೆಲಸ ಮಾಡುವುದೇ ಅಪಮಾನ. ನೀವೆಲ್ಲರೂ ರಾಜೀನಾಮೆ ಬಿಸಾಡಿ ಹೊರಬರುತ್ತೀರೋ ಅಥವಾ ನಿಮ್ಮ ಗೌರವವನ್ನು ಬದಿಗಿಟ್ಟು ಮುಂದುವರಿಯುತ್ತೀರೋ ಎಂಬುದು ನಿಮಗೆ ಬಿಟ್ಟಿದ್ದು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ನಾಡಹಬ್ಬ ದಸರಾ ವೇಳೆ ನಿಮ್ಮ ಇಲಾಖೆಯ ಅಧಿಕಾರಿಗಳು ತೋರಿದ ಈ ದುವರ್ತನೆ ಬಗ್ಗೆ ಬಾಯಿಬಿಡಿ. ಬೇಡವಾದದ್ದಕ್ಕೆಲ್ಲಾ ಕಿರುಚಾಡುವ ನೀವು ಈ ಬಗ್ಗೆ ಮಾತನಾಡಿ ” ಎಂದು ಜೆಡಿಎಸ್ ಆಗ್ರಹಿಸಿದೆ.
