‘Anima’ suspense thriller arouses intense curiosity among the audience: Audio rights sold for a whopping price! – ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಹೊಸ ಬಗೆಯ ಕಥಾಹಂದರ ಹೊಂದಿರುವ ಸಿನಿಮಾಗಳಿಗೆ ಸದಾ ಪ್ರೋತ್ಸಾಹ ಸಿಗುತ್ತಲೇ ಬಂದಿದೆ. ಇದೀಗ ಅದೇ ಸಾಲಿಗೆ ಸೇರ್ಪಡೆಗೊಳ್ಳಲು ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಸಜ್ಜಾಗಿದ್ದು, ‘ಅನಿಮಾ’ ಎಂಬ ವಿಭಿನ್ನ ಶೀರ್ಷಿಕೆಯ ಮೂಲಕ ಭಾರಿ ಸದ್ದು ಮಾಡುತ್ತಿದೆ. ಪ್ರೀತಿ, ನಿಗೂಢ ಘಟನೆಗಳು, ರಹಸ್ಯಗಳು ಹಾಗೂ ಪ್ರೇಕ್ಷಕರ ಊಹೆಗೂ ಸಿಗದ ಅನಿರೀಕ್ಷಿತ ತಿರುವುಗಳನ್ನು ಒಳಗೊಂಡಿರುವ ಈ ಚಿತ್ರವು ಮೊದಲ ನೋಟದಲ್ಲೇ ಸಿನಿರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಚಿತ್ರದ ಬಿಡುಗಡೆಗೂ ಮುನ್ನವೇ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು, ‘ಅನಿಮಾ’ ಸಿನಿಮಾದ ಆಡಿಯೋ ಹಕ್ಕುಗಳು ಭರ್ಜರಿ ಮೊತ್ತಕ್ಕೆ ಪ್ರಮುಖ ಆಡಿಯೋ ಸಂಸ್ಥೆಯ ಪಾಲಾಗಿವೆ. ಚಿತ್ರದ ಹಾಡುಗಳು ಹಾಗೂ ಕಥೆಯ ಓಟಕ್ಕೆ ತಕ್ಕಂತೆ ಮೂಡಿಬಂದಿರುವ ಹಿನ್ನೆಲೆ ಸಂಗೀತಕ್ಕೆ ಮಾರುಹೋಗಿರುವ ಆಡಿಯೋ ಕಂಪನಿ, ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ನೀಡಿ ಸಂಗೀತದ ಹಕ್ಕುಗಳನ್ನು ಖರೀದಿಸಿದೆ. ಚಿತ್ರತಂಡಕ್ಕೆ ದೊರೆತಿರುವ ಈ ಆರಂಭಿಕ ವ್ಯಾಪಾರಿಕ ಗೆಲುವು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.
‘ಎ ಡ್ರೀಮರ್ಸ್ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪುನೀತ್ ಎಂ. ಎಚ್. (ವರ್ಧನ್) ಬಂಡವಾಳ ಹೂಡಿದ್ದು, ಸಂಜು ಎಂ. ಎಚ್. ಹಾಗೂ ಮಲ್ಲೇಶ್ ರೆಡ್ಡಿ ಸಹ-ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ ವರ್ಧನ್ ಎಂ. ಎಚ್., ಹೇಮಂತ್ ಕುಮಾರ್ ಎನ್. ಸಹ-ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ನಟ ಶರತ್ ಪದ್ಮನಾಭ್ ಮತ್ತು ನಟಿ ಅನುಷಾ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಸುಶ್ಮಿತಾ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಫಾರ್ಮ್ಹೌಸ್ ಹಿನ್ನೆಲೆಯಲ್ಲಿ ಸಾಗುವ ನಿಗೂಢ ಕಥೆ, ಪಾತ್ರಗಳ ನಡುವೆ ಏರ್ಪಡುವ ಮಾನಸಿಕ ತುಮುಲಗಳು ಹಾಗೂ ಕೊನೆಯವರೆಗೂ ಸತ್ಯವನ್ನು ಮುಚ್ಚಿಟ್ಟು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ಕ್ಲೈಮ್ಯಾಕ್ಸ್ ಈ ಸಿನಿಮಾದ ಹೈಲೈಟ್ ಆಗಿರಲಿದೆ.
ಚಿತ್ರದ ತಾಂತ್ರಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿ ವಿವಾನ್ ವಿದ್ಯುತ್ ಛಾಯಾಗ್ರಹಣ, ವಿರಾಜ್ ವಿಶ್ವ ಅವರ ಚುರುಕಾದ ಸಂಭಾಷಣೆ ಹಾಗೂ ಉಜ್ವಲ್ ಚಂದ್ರ ಮತ್ತು ಚೈತನ್ಯ ಗೊಬ್ಬಿ ಅವರ ಸಂಕಲನವಿದೆ. ಅನುರಂಜನ್ ಕಲರಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದು, ರೋನಾಡ ಬಕ್ಕೆಶ್ ಅವರ ಹಿನ್ನೆಲೆ ಸಂಗೀತ ಚಿತ್ರದ ರೋಮಾಂಚಕ ಸನ್ನಿವೇಶಗಳಿಗೆ ಜೀವ ತುಂಬಿದೆ. ಪ್ರತಿಷ್ಠಿತ ‘ರವಿ ಸಿನಿಮಾ’ ಸಂಸ್ಥೆಯು ಈ ಚಿತ್ರದ ರಾಜ್ಯಾದ್ಯಂತ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಅನಿಮಾ’ ಸದ್ಯದಲ್ಲೇ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ.


