Bengaluru-Cobra: A cobra crawled over the sleeping siblings, a snake lurking under the pillow! – ರಾತ್ರಿಯಿಡೀ ಬರೋಬ್ಬರಿ ಐದು ಅಡಿ ಉದ್ದದ ವಿಷಪೂರಿತ ನಾಗರಹಾವಿನ ಮೇಲೆಯೇ ಮಲಗಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ರೋಚಕ ಘಟನೆ ನಗರದ ಬಾಗಲಗುಂಟೆಯ ಭೈರವೇಶ್ವರ ನಗರದಲ್ಲಿ ನಡೆದಿದೆ.
ಬೆಂಗಳೂರು ಅ.23: ರಾತ್ರಿ ನಿದ್ದೆಗೆ ಜಾರಿದವರಿಗೆ ಬೆಳಗ್ಗೆ ಏಳ್ತಿದ್ದಂತೆ ನಾಗರಹಾವು ಬಿಗ್ ಶಾಕ್ ಕೊಟ್ಟಿದೆ. ಕಿಟಕಿಯಿಂದ ರೂಮ್ ಒಳಗೆ ಬಂದ ಹಾವು (Snake) ಸೈಲೆಂಟ್ ಆಗಿ ದಿಂಬಿನ ಕೆಳಗೆ ಸೇರಿಕೊಂಡಿದೆ. ರಾತ್ರಿ ನಿದ್ದೆಯಲ್ಲಿ ಮೈಮೇಲೆ ಏನೋ ಹರಿದಾಡಿದ ಅನುಭವವಾದರೂ ಇಲಿ ಇರಬೇಕೆಂದು ನಿರ್ಲಕ್ಷಿಸಿ ಮಲಗಿದ್ದ ಅಣ್ಣ-ತಂಗಿ ಇಬ್ಬರು, ಬೆಳಗ್ಗೆ ಕಣ್ಣು ಬಿಟ್ಟಾಗ ಕಂಡ ದೃಶ್ಯಕ್ಕೆ ಬೆಚ್ಚಿಬಿದ್ದಿದ್ದಾರೆ. ದಿಂಬಿನ ಕೆಳಗೆ ಇತ್ತು ನಾಗಪ್ಪ. ಜಸ್ಟ್ ಮಿಸ್ನಲ್ಲಿ ಉಳಿಯಿತು ಇಬ್ಬರ ಜೀವ.
ಕಿಟಿಕಿ ಮೂಲಕ ಬಂದ ಬುಸ್ ಬುಸ್ ನಾಗಪ್ಪ: ರಾತ್ರಿಯಿಡೀ ಬರೋಬ್ಬರಿ ಐದು ಅಡಿ ಉದ್ದದ ವಿಷಪೂರಿತ ನಾಗರಹಾವಿನ ಮೇಲೆಯೇ ಮಲಗಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ರೋಚಕ ಘಟನೆ ನಗರದ ಬಾಗಲಗುಂಟೆಯ ಭೈರವೇಶ್ವರ ನಗರದಲ್ಲಿ ನಡೆದಿದೆ. ಮನೆಯ ಕಾಂಪೌಂಡ್ ಒಳಗೆ ನುಗ್ಗಿದ್ದ ನಾಗರಹಾವು, ಕಿಟಕಿಯ ಪಕ್ಕದಲ್ಲೇ ಇರಿಸಲಾಗಿದ್ದ ವಾಷಿಂಗ್ ಮಷಿನ್ ಏರಿ, ತೆರೆದಿದ್ದ ಕಿಟಿಕಿಯ ಮೂಲಕ ರೂಮ್ಗೆ ಬಂದಿದೆ.
ಮೈ ಮೇಲೆ ಹರಿದಿದೆ ನಾಗರಹಾವು : ನಿದ್ದೆಯಲ್ಲಿದ್ದ ಅಣ್ಣ-ತಂಗಿಯ ಮೈಮೇಲೆ ಒಂದೆರಡು ಬಾರಿ ನಾಗರಹಾವು ಹರಿದಾಡಿದೆ. ಭಾರೀ ನಿದ್ದೆಯಲ್ಲಿದ್ದ ಇಬ್ಬರು ಅದು ಇಲಿ ಇರಬಹುದೆಂದು ಭಾವಿಸಿ ಮೈಕೊಡವಿ ಮತ್ತೆ ನಿದ್ದೆಗೆ ಜಾರಿದ್ದಾರೆ. ಬಳಿಕ ಹಾವು ದಿಂಬಿನ ಕೆಳಗೆ ಹೋಗಿ ಸೇರಿಕೊಂಡಿದೆ. ಬೆಳಗ್ಗೆ ಎದ್ದು ದಿಂಬು ಎತ್ತಿಡಲು ಹೋದಾಗ ಬೃಹತ್ ನಾಗರ ಹಾವು ಕಂಡು ಅಣ್ಣ-ತಂಗಿ ಬೆಚ್ಚಿಬಿದ್ದಿದ್ದಾರೆ.
ಉರಗ ತಜ್ಞರಿಂದ ಹಾವಿನ ರಕ್ಷಣೆ : ಬೆಳಗ್ಗೆ ಎದ್ದು ಹಾಸಿಗೆ ಸರಿಪಡಿಸುವಾಗ ದಿಂಬಿನ ಕೆಳಗೆ ಸುರಳಿ ಸುತ್ತಿ ಮಲಗಿದ್ದ ಐದು ಅಡಿ ಉದ್ದದ ಬೃಹತ್ ನಾಗರ ಹಾವನ್ನು ಕಂಡು ಮನೆಯವರ ದಿಗ್ಧಮೆಗೊಂಡಿದ್ದಾರೆ. ತಕ್ಷಣವೇ ಉರಗ ತಜ್ಞ ನಾಗೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ನಾಗೇಂದ್ರ ಅವರು ಹಾವನ್ನು ಸೆರೆಹಿಡಿದು, ಹೆಸರಘಟ್ಟದ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.
ಚಳಿಗಾಲದಲ್ಲಿ ಹಾವಿನ ಬಗ್ಗೆ ಹುಷಾರ್ : ಇದೇ ವೇಳೆ ಉರಗ ತಜ್ಞ ನಾಗೇಂದ್ರ ಅವರು, ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸಿದ್ದಾರೆ. ಅಕ್ಟೋಬರ್ ನಲ್ಲಿ ಚಳಿಗಾಲ ಶುರುವಾಗುತ್ತದೆ. ಆದ್ದರಿಂದ ಹಾವುಗಳಿಗೆ ಬೆಚ್ಚಗಿರುವ ಜಾಗ ಬೇಕಾಗುತ್ತದೆ. ಹಂಡೆ ಒಲೆ, ಸೌದೆ ಒಲೆ, ಗಾಡಿ ಎಂಜಿನ್, ಶೂ ಒಳಗೆ, ಹಾಸಿಗೆ, ದಿಂಬಿನ ಕೆಳಗಡೆ ಹಾವುಗಳು ಸೇರಿಕೊಳ್ಳುವ ಸಾಧ್ಯತೆ ಇದೆ. ಮನೆಯ ಕಿಟಕಿ, ಬಾಗಿಲುಗಳನ್ನ ತೆರೆಯಬೇಡಿ ಎಂದು ಸಲಹೆ ನೀಡಿದ್ದಾರೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.
ಮನೆ ಬಳಿ ತ್ಯಾಜ್ಯಗಳನ್ನ ಸಂಗ್ರಹಿಸಿಡಬೇಡಿ. ಗಿಡ, ಮರ ಬಳ್ಳಿಗಳನ್ನು ಬಾಗಿಲು ಪಕ್ಕದಲ್ಲಿ ಬೆಳಸಬೇಡಿ ಅದನ್ನು ಹತ್ತಿಕೊಂಡು ಒಳಗೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿಕೆ ನೀಡಿದ್ದಾರೆ. ಹಾವು ಮನೆಯೊಳಗೆ ಬಂದು ಮೈಮೇಲೆ ಹರಿದಾಡಿದ್ರೂ ಇಬ್ಬರ ಜೀವ ಉಳಿದಿರೋದು ಅದೃಷ್ಟವೇ ಸರಿ ಅಂತಿದ್ದಾರೆ ಅಕ್ಕ-ಪಕ್ಕದ ಜನ.
