Renukaswamy murder case: Pavithra Gowda’s petition dismissed – living with Nigerian prisoners is inevitable; two others denied bail – ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ನೈಜೀರಿಯನ್ ಮಹಿಳಾ ಕೈದಿಗಳ ಕಿರುಕುಳದ ಕಾರಣ ನೀಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಯಾರಕ್ ಬದಲಾವಣೆಗೆ ಕೋರಿದ್ದ ಅವರ ಅರ್ಜಿಯನ್ನು ಬೆಂಗಳೂರು ನ್ಯಾಯಾಲಯ ವಜಾಗೊಳಿಸಿದೆ. ಹೀಗಾಗಿ ಅವರು ಅದೇ ಕೊಠಡಿಯಲ್ಲಿ ಮುಂದುವರಿಯಬೇಕಾಗಿದೆ. ಇದೇ ವೇಳೆ, ಪ್ರಕರಣದ ಪ್ರಮುಖ ಸಹ ಆರೋಪಿಗಳಾದ ಅನುಕುಮಾರ್ ಹಾಗೂ ಆಟೋ ಚಾಲಕ ಜಗದೀಶ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನೂ ಕೋರ್ಟ್ ತಿರಸ್ಕರಿಸಿದೆ.
- ಪವಿತ್ರಾ ಗೌಡ ಅವರು ಜೈಲಿನ ಬ್ಯಾರಕ್ ಬದಲಾವಣೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಜಾ.
- ನಟ ದರ್ಶನ್ ಆಪ್ತೆಯು ನೈಜೀರಿಯಾ ಕೈದಿಗಳೊಟ್ಟಿಗೆ ಜೈಲುವಾಸ ಮುಂದುವರೆಸಬೇಕಿದೆ.
- ಜಗದೀಶ್ ಮತ್ತು ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನೂ ವಜಾ ಮಾಡಿದ ನ್ಯಾಯಾಲಯ.
![]()
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಅವರು ಜೈಲಿನ ಬ್ಯಾರಕ್ ಬದಲಾವಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರು ನ್ಯಾಯಾಲಯ ವಜಾ ಮಾಡಿದೆ. ಈ ಮೂಲಕ ನಟ ದರ್ಶನ್ ಆಪ್ತೆಯು ನೈಜೀರಿಯಾ ಕೈದಿಗಳೊಟ್ಟಿಗೆ ಜೈಲುವಾಸ ಮುಂದುವರೆಸಬೇಕಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಪವಿತ್ರಾ ಗೌಡ ಅವರು ತಾವು ಇರುವ ಕೊಠಡಿಯಲ್ಲಿ ನೈಜೀರಿಯನ್ ಮಹಿಳಾ ಕೈದಿಗಳಿದ್ದಾರೆ. ಇವರಿಂದ ಸಾಕಷ್ಟು ತೊಂದರೆ ಆಗುತ್ತಿದ್ದು, ತೀವ್ರ ಕಿರುಕುಳ ಅನುಭವಿಸುತ್ತಿದ್ದೇನೆ. ಜೈಲಿನ ಬ್ಯಾರಕ್ ಬದಲಾವಣೆ ಮಾಡಿ ಎಂದು ನ್ಯಾಯಾಲಯಕ್ಕೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಜೈಲು ಆಡಳಿತದಿಂದ ಇ-ಮೇಲ್ ಮೂಲಕ ವಸ್ತುಸ್ಥಿತಿ ವರದಿ ತರಿಸಿಕೊಂಡಿದ್ದ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಸಂಬ್ರಾಣಿ ಅವರು ಪವಿತ್ರಾ ಗೌಡ ಅವರ ಅರ್ಜಿಯನ್ನು ವಜಾ ಮಾಡಿದೆ. ಪವಿತ್ರಾ ಗೌಡ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ. ಹೀಗಾಗಿ, ಬ್ಯಾರಕ್ ಬದಲಾವಣೆ ಅಸಾಧ್ಯವಾಗಿದ್ದು, ಪವಿತ್ರಾ ಗೌಡ ಅವರು ಅನಿವಾರ್ಯವಾಗಿ ವಿದೇಶಿ ಕೈದಿಗಳ ಜೊತೆಯಲ್ಲೇ ದಿನ ದೂಡಬೇಕಿದೆ.
ಆರೋಪಿಗಳಾದ ಅನುಕುಮಾರ್, ಜಗದೀಶ್ಗೂ ಸಿಗದ ರಿಲೀಫ್ : ಇದೇ ಪ್ರಕರಣದ ಪ್ರಮುಖ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನೂ ಸಹ ನ್ಯಾಯಾಲಯ ರದ್ದುಪಡಿಸಿದೆ. ಪ್ರಕರಣದ 7ನೇ ಆರೋಪಿಯಾಗಿರುವ ಅನುಕುಮಾರ್, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಿಸಿಕೊಂಡು ಬಂದ ತಂಡದಲ್ಲಿದ್ದು ಮಹತ್ವದ ಪಾತ್ರ ವಹಿಸಿದ್ದಾನೆ ಎಂಬ ಆರೋಪವಿದೆ. ಮತ್ತೊಂದೆಡೆ, ಚಿತ್ರದುರ್ಗದಲ್ಲಿ ಆಟೋ ಓಡಿಸುತ್ತಿದ್ದ ಆರೋಪಿ ಜಗದೀಶ್, ಕೃತ್ಯ ನಡೆದ ಬೆನ್ನಲ್ಲೇ ಅಲ್ಲಿನ ಡಿವೈಎಸ್ಪಿ ಕಚೇರಿಗೆ ತೆರಳಿ ಶರಣಾಗಿದ್ದ. ತರುವಾಯ ಬೆಂಗಳೂರು ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ತನಿಖೆಗೆ ಒಳಪಡಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಇವರಿಬ್ಬರು ಬಿಡುಗಡೆಗಾಗಿ ಕೋರ್ಟ್ ಮೆಟ್ಟಿಲೇರಿದ್ದರಾದರೂ, ನ್ಯಾಯಾಲಯವು ಇವರ ಅರ್ಜಿಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ.
