Are you bored of eating regular millet porridge? Then try making sour millet porridge! – ರಾಗಿ ಮುದ್ದೆ ಕರ್ನಾಟಕದ ಜನಪ್ರಿಯ ಸಾಂಪ್ರದಾಯಿಕ ಆಹಾರ. ಸಾಮಾನ್ಯ ರಾಗಿ ಮುದ್ದೆಯನ್ನು ತಿಂದು ಬೇಸರವಾಗಿದ್ದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಹುಳಿ ರಾಗಿ ಮುದ್ದೆ ತಯಾರಿಸಿ ನೋಡಿ.

ರಾಗಿ ಮುದ್ದೆ ಕರ್ನಾಟಕದ ಜನಪ್ರಿಯ ಸಾಂಪ್ರದಾಯಿಕ ಆಹಾರ. ಸಾಮಾನ್ಯ ರಾಗಿ ಮುದ್ದೆಯನ್ನು ತಿಂದು ಬೇಸರವಾಗಿದ್ದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಹುಳಿ ರಾಗಿ ಮುದ್ದೆ ತಯಾರಿಸಿ ನೋಡಿ.
ರಾಗಿ ಹಿಟ್ಟಿನ ರುಚಿಗೆ ಹುಣಸೆಹಣ್ಣಿನ ಹುಳಿ, ಖಾರದ ಒಗ್ಗರಣೆ ಸೇರಿಕೊಂಡಾಗ ಈ ಖಾದ್ಯ ಮತ್ತಷ್ಟು ರುಚಿಯಾಗುತ್ತದೆ. ಮನೆಯಲ್ಲಿರುವ ಸರಳ ಪದಾರ್ಥಗಳನ್ನು ಬಳಸಿ ಸುಲಭವಾಗಿ ತಯಾರಿಸಬಹುದಾದ ಈ ಹುಳಿ ರಾಗಿ ಮುದ್ದೆಯನ್ನು ಉಚ್ಚೆಳ್ಳು ಚಟ್ನಿ ಅಥವಾ ಖಾರವಾದ ಚಟ್ನಿಯೊಂದಿಗೆ ಸವಿಯಬಹುದು. ಹಾಗಾದರೆ, ಇದನ್ನು ಮಾಡುವ ವಿಧಾನ ತಿಳಿಯೋಣ…
ಬೇಕಾಗುವ ಪದಾರ್ಥಗಳು…
- ರಾಗಿ ಹಿಟ್ಟು – 1 ಬಟ್ಟಲು
- ಹುಣಸೆಹಣ್ಣು – ಸಣ್ಣ ನಿಂಬೆಹಣ್ಣಿನ ಗಾತ್ರ
- ನೀರು – 2 ರಿಂದ 3 ಬಟ್ಟಲು
- ಉಪ್ಪು – ರುಚಿಗೆ ತಕ್ಕಷ್ಟು
- ಸಾಸಿವೆ – ಅರ್ಧ ಚಮಚ
- ಒಣ ಮೆಣಸಿನಕಾಯಿ – 2
- ಕರಿಬೇವು – ಸ್ವಲ್ಪ
- ಈರುಳ್ಳಿ- ಸ್ವಲ್ಪ (ಸಣ್ಣಗೆ ಕತ್ತರಿಸಿದ್ದು)
- ಅರಿಶಿನ – ಚಿಟಿಕೆ
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಎಣ್ಣೆ – 2-3 ಚಮಚ
ಮಾಡುವ ವಿಧಾನ…
- ಹುಣಸೆಹಣ್ಣನ್ನು ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿ, ಚೆನ್ನಾಗಿ ಹಿಸುಕಿ ರಸ ತೆಗೆದುಕೊಳ್ಳಿ. ಇದಕ್ಕೆ ನೀರು ಸೇರಿಸಿ 1 ಕಪ್ನಷ್ಟು ಮಾಡಿಕೊಳ್ಳಿ.
- ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ಬಳಿಕ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಹುಣಸೆ ರಸ, ಅರಿಶಿನ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಅಗತ್ಯವಿದ್ದಷ್ಟು ನೀರು ಸೇರಿಸಿ. ಕುದಿಯಲು ಬಿಡಿ.
- ಉರಿ ಕಡಿಮೆ ಮಾಡಿ, ರಾಗಿ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಗಂಟುಗಳಾಗದಂತೆ ನಿರಂತರವಾಗಿ ಕೈಯಾಡಿಸಿ. ಮಿಶ್ರಣ ಗಟ್ಟಿಯಾಗುವವರೆಗೆ ಕಲಸಿ.
- ಮಿಶ್ರಣ ಗಟ್ಟಿಯಾಗಿ ಪಾತ್ರೆಯ ಅಂಚು ಬಿಡಲು ಆರಂಭಿಸಿದಾಗ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ 5–8 ನಿಮಿಷ ಬೇಯಿಸಿ. ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ಕೈಗೆ ನೀರು ಅಥವಾ ಸ್ವಲ್ಪ ಎಣ್ಣೆ ಸವರಿಕೊಂಡು ಮುದ್ದೆಗಳನ್ನಾಗಿ ಮಾಡಿದರೆ, ರುಚಿಕರವಾದ ಹುಳಿ ರಾಗಿ ಮುದ್ದೆ ಸವಿಯಲು ಸಿದ್ಧ.
