Sowjanya Case: Big update in Sowjanya case! SIT investigation starts with mother Kusumavati! –ಸೌಜನ್ಯ ಪ್ರಕರಣ ಮರುತನಿಖೆ ವೇಗ ಪಡೆದುಕೊಂಡಿದ್ದು, ಎಸ್ಐಟಿ ಅಧಿಕಾರಿಗಳು ಸೌಜನ್ಯ ತಾಯಿ ಕುಸುಮಾವತಿ ಗೌಡರಿಂದಲೇ ತನಿಖೆ ಆರಂಭಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಯನ್ನು SIT ತಂಡ ಚುರುಕುಗೊಳಿಸಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ಮರುತನಿಖೆಗೆ ಮಹತ್ವದ ಆದೇಶ ನೀಡಿದ್ದು, 3 ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸಲು ಗಡುವು ನೀಡಿದೆ. ಈ ಹಿನ್ನೆಲೆ ಎಸ್ಐಟಿ (SIT) ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಸೌಜನ್ಯ ಪ್ರಕರಣ ಮರುತನಿಖೆ ವೇಗ ಪಡೆದುಕೊಂಡಿದ್ದು, ಎಸ್ಐಟಿ ಅಧಿಕಾರಿಗಳು ಸೌಜನ್ಯ ತಾಯಿ ಕುಸುಮಾವತಿ ಗೌಡರಿಂದಲೇ ತನಿಖೆ ಆರಂಭಿಸಿದ್ದಾರೆ. ಬೆಳ್ತಂಗಡಿ ಕೋರ್ಟ್ನಲ್ಲಿ ಸೌಜನ್ಯ ತಾಯಿ ಕುಸುಮಾವತಿ ಗೌಡ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಕುಸುಮಾವತಿ ಗೌಡ ರಕ್ತದ ಮಾದರಿ ಸಂಗ್ರಹಿಸಿ ಮುಂದಿನ ತನಿಖೆಗೆ ಬಳಸಲು SIT ಸಿದ್ಧತೆ ನಡೆಸಿದೆ.
ಸೌಜನ್ಯ ಪ್ರಕರಣದ ತನಿಖಾಧಿಕಾರಿ ಎಸ್ ಲೋಕೇಶ್.ಪಿ.ಜಗಲಾಸರ್ ಮತ್ತು ಸಹಾಯಕ ತನಿಖಾಧಿಕಾರಿ ಎಸಿಪಿ ಮನೋಜ್ ಕುಮಾರ್ ನಾಯಕ್ ನೇತೃತ್ವದ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಭೇಟಿ ನೀಡಿದೆ. ಪ್ರಿಂಟರ್, ಲ್ಯಾಪ್ ಟಾಪ್ ಸಮೇತ ಬೆಳ್ತಂಗಡಿ ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ ಆಗಮಿಸಿದೆ. ಸೌಜನ್ಯ ತಾಯಿ ಕುಸುಮಾವತಿ ನ್ಯಾಯಾಲಯಕ್ಕೆ ಭೇಟಿ ನೀಡಿದ್ದು, ಕುಸುಮಾವತಿ ಅವರ ರಕ್ತದ ಸ್ಯಾಂಪಲ್ ಅನ್ನು ಎಸ್ಐಟಿ ಟೀಂ ಸಂಗ್ರಹಿಸಿದೆ. ಇಬ್ಬರು ಸರಕಾರಿ ಪಂಚರ ಸಮಕ್ಷಮದಲ್ಲಿ ರಕ್ತದ ಮಾದರಿ ಪಡೆಯಲಾಗಿದೆ. ನ್ಯಾಯಾಧೀಶರಾದ ಶಶಾಂಕ್ ನಾಗೇಂದ್ರ ಭಟ್ ಮುಂದೆ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಡಿಎನ್ಎ ಪರೀಕ್ಷೆಗೆ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೌಜನ್ಯ ತಾಯಿ ರಕ್ತದ ಮಾದರಿಯನ್ನು ಸಂಗ್ರಹಿಸಿದ ಬಳಿಕ ಎಸ್ಐಟಿ ಅಧಿಕಾರಿಗಳು ಎಫ್ಎಸ್ಎಲ್ಗೆ ಕಳುಹಿಸಲಿರುತ್ತಾರೆ. ಇನ್ನು, ತನಿಖೆಯ ಭಾಗವಾಗಿ ಸೌಜನ್ಯ ಮೃತದೇಹ ದೊರೆತ ಸ್ಥಳಕ್ಕೆ SIT ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಮರು ತನಿಖೆಗೆ ಆದೇಶಿಸಿದ್ದ ಸುಪ್ರೀಂ ಕೋರ್ಟ್ : 14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ನಿಗೂಢ ಸಾವು ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ತಿಂಗಳ ಹಿಂದೆ ತೀರ್ಪು ಕಾಯ್ದಿರಿಸಿದ್ದ ನ್ಯಾ. ಸಂಜಯ್ ಕುಮಾರ್ ಪೀಠ ಇದೀಗ ಮಹತ್ವದ ಆದೇಶ ನೀಡಿದ್ದು, 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಡೆಡ್ಲೈನ್ ನೀಡಿತ್ತು. ಹಿಂದೆ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ತನಿಖೆಗೆ ಸೇರಿಸದಂತೆ ಹೊಸದಾಗಿ ಪ್ರಕರಣದ ತನಿಖೆಗೆ ಸುಪ್ರೀಂ ಸೂಚನೆ ನೀಡಿದ್ದು, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಆದೇಶದ ಮೂಲಕ ಸೌಜನ್ಯ ಕೊಲೆ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಂತಾಗಿದೆ.
