Festive garbage still not cleared in Bengaluru: Contractors stop disposal, problem worsens – ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ತ್ಯಾಜ್ಯ ನಿರ್ವಹಣಾ ನಿಯಮಿತ ಹಾಗೂ ಬೆಂಗಳೂರಿನ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿ, ಸಾರ್ವಜನಿಕರ ಆರೋಗ್ಯಕ್ಕೆ ಏರುಪೇರಾಗುವುದನ್ನು ತಡೆಗಟ್ಟಲು ಐದು ಬೆಂಗಳೂರು ನಗರ ಪಾಲಿಕೆಗಳೊಂದಿಗೆ ನೇರವಾಗಿ ಹಾಗೂ ಸರಬರಾಜುದಾರರು/ಗುತ್ತಿಗೆದಾರರ ಅಧೀನದಲ್ಲಿತೊಡಗಿಸಿಕೊಂಡಿರುವ ಎಲ್ಲಾ ಪೌರ ಕಾರ್ಮಿಕರು, ಆಟೋ ಸಹಾಯಕರು, ಕಾಂಪಾಕ್ಟರ್ ಲೋಡರ್ಗಳು, ಚಾಲಕರು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಒಂದು ವರ್ಷದ ಅವಧಿಗೆ ಮುಷ್ಕರ ಹೂಡುವುದನ್ನು ನಿಷೇಧಿಸಿ ಆದೇಶಿಸಿದೆ ಎಂದು ತಿಳಿಸಲಾಗಿದೆ.

‘‘ಕಾರ್ಮಿಕ ಇಲಾಖೆ ಮೇ 22ರಿಂದ ವೇತನ ಪರಿಷ್ಕರಿಸಿದ್ದು, ಆ ಆದೇಶವನ್ನು ಜಾರಿ ಮಾಡಲೇಬೇಕಾದ ಪರಿಸ್ಥಿತಿ ನಮ್ಮ ಸೇವಾದಾರರ ಮೇಲಿದೆ. ಇದರ ಬಗ್ಗೆ ಯಾವ ಒಬ್ಬ ಉನ್ನತಾಧಿಕಾರಿಯೂ ಗಮನಹರಿಸದೆ ಇರುವುದರಿಂದಾಗಿ ನೌಕರರ ಸಂಘಟಿತ ಒಕ್ಕೂಟಗಳು, ಕಾರ್ಮಿಕ ಇಲಾಖೆ, ಭವಿಷ್ಯ ನಿಧಿ ಮತ್ತು ಆರೋಗ್ಯ ವಿಮೆ ಇಲಾಖೆಗಳು ಪದೇ ಪದೇ ನೋಟಿಸ್ ಜಾರಿ ಮಾಡಿವೆ. ವೇತನಕ್ಕೆ ತಗಲುವ ಇಎಸ್ಐ ಮತ್ತು ಇಪಿಎಫ್ ವಂತಿಕೆ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಇದೆ. ಇದು ಸೇವಾದಾರರಿಗೆ ಹೊರೆಯಾಗಲಿದೆ,’’ ಎಂದು ಕಸ ವಿಲೇವಾರಿದಾರರ ಸಂಘದ ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ.
‘‘2017-2018ನೇ ಸಾಲಿನಲ್ಲಿಡೀಸೆಲ್ ದರವನ್ನು 66 ರೂ. ನಿಗದಿಪಡಿಸಲಾಗಿತ್ತು. ಈವರೆಗೂ ಅದನ್ನು ಪರಿಷ್ಕರಿಸಿಲ್ಲ. ಆದರೀಗ, ಲೀಟರ್ ಡೀಸೆಲ್ ದರ 98.80 ರೂ.ಗೆ ಏರಿದೆ. ಆದರೆ, ಹೆಚ್ಚುವರಿ ಹಣ ನೀಡುತ್ತಿಲ್ಲ. ಜಿಬಿಎ ಮುಖ್ಯ ಆಯುಕ್ತರ ಜತೆಗೆ ಸಭೆ ನಡೆಸಿದರೂ ಪರಿಷ್ಕರಣೆ ಆಗಿಲ್ಲ. ಕಾರ್ಮಿಕ ಇಲಾಖೆ ವಾರ್ಷಿಕವಾಗಿ ಪರಿಷ್ಕರಿಸುವ ತುಟ್ಟಿಭತ್ಯೆ (ವಿಡಿಎ) ಜಾರಿಗೊಳಿಸಲು ಬಿಎಸ್ಡಬ್ಲ್ಯುಎಂಎಲ್ ಹಾಗೂ ಜಿಬಿಎ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ತಿಂಗಳ ಬಿಲ್ ಪಾವತಿಗೆ 25 ರಿಂದ 30 ದಿನ ಅಲೆದಾಡಬೇಕಾಗಿದೆ. ಸರಕಾರದ ವಿರುದ್ಧ ನಾವು ಹೋಗುತ್ತಿಲ್ಲ. ನಗರ ಸ್ವಚ್ಛತೆಗೆ ಜವಾಬ್ದಾರಿ ಹೊಂದಿಲ್ಲದ ಹಾಗೂ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸದ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧದ ಪ್ರತಿಭಟಿಸುತ್ತಿದ್ದೇವೆ,’’ ಎಂದು ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ-ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಬಾಲಸುಬ್ರಮಣಿಯಂ ತಿಳಿಸಿದರು.
