ವಾಷಿಂಗ್ಟನ್: ಒಂದು ಕಾಲದಲ್ಲಿ ಡೊನಾಲ್ಡ್ ಟ್ರಂಪ್ ಆಪ್ತಮಿತ್ರ ಮತ್ತು ಸಲಹೆಗಾರರಾಗಿದ್ದ ಬಿಲಿಯನೇರ್ ಎಲಾನ್ ಮಸ್ಕ್ ಇದೀಗ ಅವರ ವಿರುದ್ಧ ತಿರುಗಿ ಬಿದ್ದಿದ್ದು, “ಅಮೆರಿಕ ಪಾರ್ಟಿ” ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸಿರುವುದಾಗಿ ಹೇಳಿದ್ದಾರೆ.
ಎಲಾನ್ ಮಸ್ಕ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮನಸ್ತಾಪ ಮೂಡಿದ್ದು, ಇಬ್ಬರು ಸಾರ್ವಜನಿಕವಾಗಿ ಪರಸ್ಪರ ಟೀಕೆಗಳಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ಟ್ರಂಪ್’ಗೆ ತಿರುಗೇಟು ನೀಡಲು ಮಸ್ಕ್ ಹೊಸ ಪಕ್ಷ ರಚನೆ ಮಾಡಿರುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಸ್ಕ್ ಅವರು, ನಮ್ಮ ದೇಶವನ್ನು ವ್ಯರ್ಥ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ವಿಷಯ ಬಂದಾಗ, ನಾವು ಪ್ರಜಾಪ್ರಭುತ್ವದಲ್ಲಲ್ಲ, ಏಕಪಕ್ಷೀಯ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಮಸ್ಕ್ ಪ್ರಸ್ತುತದ ರಾಜಕೀಯ ವ್ಯವಸ್ಥೆಯನ್ನು ಟೀಕಿಸಿದ್ದಾರೆ. ಅಲ್ಲದೆ, ಇಂದು, ನಿಮ್ಮ ಸ್ವಾತಂತ್ರ್ಯವನ್ನು ಮರಳಿ ನೀಡಲು ಅಮೇರಿಕಾ ಪಕ್ಷವನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, “ಏಕಪಕ್ಷ” ವ್ಯವಸ್ಥೆ ಎಂದು ಕರೆಯುವ ಅಮೆರಿಕದ ರಾಜಕೀಯ ವ್ಯವಸ್ಥೆಗೆ ಹೇಗೆ ಸವಾಲು ಹಾಕಬಹುದು ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
ನಾವು ಏಕಪಕ್ಷ ವ್ಯವಸ್ಥೆಯನ್ನು ಭೇದಿಸಲು ಹೊರಟಿರುವ ಮಾರ್ಗವೆಂದರೆ, ಲ್ಯೂಕ್ರಾದಲ್ಲಿ ಸ್ಪಾರ್ಟನ್ನರ ಅಜೇಯತೆಯ ಪುರಾಣವನ್ನು ಎಪಾಮಿನೊಂಡಾಸ್ ಹೇಗೆ ಛಿದ್ರಗೊಳಿಸಿದರು ಎಂಬುದರ ಒಂದು ರೂಪಾಂತರವನ್ನು ಬಳಸುವುದಾಗಿದೆ ಅಂದರೆ, ಯುದ್ಧಭೂಮಿಯಲ್ಲಿ ನಿಖರವಾದ ಸ್ಥಳದಲ್ಲಿ ಅತ್ಯಂತ ಕೇಂದ್ರೀಕೃತ ಬಲ ಎಂದು ವಿವರಿಸಿದ್ದಾರೆ.
