ಪರಶುರಾಂಪುರವನ್ನು ತಾಲೂಕು ಕೇಂದ್ರವನ್ನಾಗಿಸುವಂತೆ ಸದನದಲ್ಲಿ ಶಾಸಕ ಟಿ. ರಘುಮೂರ್ತಿ ಒತ್ತಾಯ
ಚಳ್ಳಕೆರೆ:ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಶಾಸಕ ಟಿ ರಘುಮೂರ್ತಿ ಸದನದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡರನ್ನು ಒತ್ತಾಯಿಸಿದರು. ಸದನದಲ್ಲಿ ಮಾತನಾಡಿದ ಶಾಸಕರು ಪರಶುರಾಮ ಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ರಚನೆ ಮಾಡುವಂತೆ 2013 ರಿಂದ ಕಳೆದ 13 ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತ ಬಂದಿದ್ದೇನೆ ಆದರೂ ನನ್ನ ಬೇಡಿಕೆ ಇದುವರೆಗೂ ಈಡೇರಿಲ್ಲ ಪ್ರತಿ ಅಧಿವೇಶನದಲ್ಲೂ ಸಕಾರಾತ್ಮಕ ಉತ್ತರವನ್ನು ಪಡೆಯುತ್ತಿದ್ದೇನೆ ಹೊರತು ತಾಲೂಕು ಕೇಂದ್ರವನ್ನಾಗಿ ಮಾಡಲು ಸಾಧ್ಯವಾಗಿಲ್ಲ. 2016ರ ವೇಳೆ ಆಗಿನ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ರವರು ಪರಶುರಾಂಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಒಪ್ಪಿದ್ದರು. ಆದರೆ ಸರ್ಕಾರದ ನಡೆಯಿಂದ ಅದು ಸಾಧ್ಯವಾಗಿಲ್ಲ ಕಳೆದ ಸಾಲಿನಲ್ಲಿ 63 ತಾಲೂಕುಗಳ ಜೊತೆಗೆ ಪರಶುರಾಂಪುರ ತಾಲೂಕು ಆಗುವ ಭರವಸೆ ಇತ್ತು ಅದು ಸಹ ಈಡೇರಿಲ್ಲ ಕ್ಷೇತ್ರದ ಒಬ್ಬ ಶಾಸಕನಾಗಿ ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಈಗಾಗಲೇ ಆ ಭಾಗದ ಜನರು ತಾಲೂಕು ರಚನೆಗಾಗಿ ಹೋರಾಟ ನಡೆಸಲು ಸಿದ್ಧತೆ ನಡೆಸಿದ್ದು, ಸರ್ಕಾರದ ಭಾಗವಾಗಿರುವ ಶಾಸಕನಾಗಿರುವುದರಿಂದ ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು, ವಿಶೇಷ ಮಾನ್ಯತೆ ಎಂದು ಪರಿಗಣಿಸಿ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
