ಗುಂಡ್ಲುಪೇಟೆ: ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಫಲವಾದ ಹಿನ್ನೆಲೆ ಸುಮಾರು 10ಕ್ಕೂ ಅಧಿಕ ಮಂದಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ರೈತರು ಬೋನಿನಲ್ಲಿ ಕೂಡಿ ಹಾಕಿ, ದಿಗ್ವಂಧನ ವಿಧಿಸಿದ ಅಪರೂಪದ ಪ್ರಸಂಗ ಬಂಡೀಪುರ ಬಫರ್ ಜೋನ್ ವಲಯ ವ್ಯಾಪ್ತಿಯ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.ತಾಲೂಕಿನ ಬೊಮ್ಮಲಾಪುರ ಗ್ರಾಮದ ಕೆಇಬಿ ಗಂಗಪ್ಪ ಎಂಬ ರೈತನ ಜಮೀನಿನಲ್ಲಿ ಕೆಲ ತಿಂಗಳಿಂದ ಹುಲಿ-ಚಿರತೆ ಉಪಟಳ ಹೆಚ್ಚಿದ್ದು, ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಈ ಘಟನೆಯ ಬಳಿಕ ರೈತರ ಒತ್ತಾಯಕ್ಕೆ ಮಣಿದು ಅರಣ್ಯ ಇಲಾಖೆಯು ಹುಲಿ ಮತ್ತು ಚಿರತೆ ಸೆರೆ ಹಿಡಿಯಲು ಬೋನ್ ಇಡಲಾಗಿತ್ತು. ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ನಿಗದಿತ ಸಮಯಕ್ಕೆ ಬಾರದ ಹಿನ್ನೆಲೆ ರೈತರು ಕೋಪಗೊಂಡಿದ್ದರು. ನಂತರ ತಡವಾಗಿ ಆಗಮಿಸಿದ ಸುಮಾರು 10ಕ್ಕೂ ಅಧಿಕ ಮಂದಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಹುಲಿ ಸೆರೆಹಿಡಿಯಲು ಬೋನಿನಲ್ಲಿ ಕೂಡಿ ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು .
ಈ ಘಟನೆಯ ಮಾಹಿತಿ ಅರಿತ ಗುಂಡ್ಲುಪೇಟೆ ವಲಯದ ಅರಣ್ಯ ಇಲಾಖೆಯ ಎಸಿ.ಎಫ್.ಸುರೇಶ್ ಹಾಗೂ ಬಂಡೀಪುರ ವಲಯದ ಎಸಿ.ಎಫ್. ನವೀನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ರೈತರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಹುಲಿ ಸೆರೆ ಹಿಡಿಯುವ ತನಕ ಅರಣ್ಯಾಧಿಕಾರಿಗಳು ಊರಿಂದ ಹೊರಗೆ ಹೋಗಬಾರದೆಂದು ತಿಳಿಸಿದ್ದಕ್ಕೆ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ರೈತರ ಸಂಘ ಜಿಲ್ಲಾಧ್ಯಕ್ಷರಾದ ಹೊನ್ನೂರ್ ಪ್ರಕಾಶ್ ಅವರು ರೈತರು ಹಾಗೂ ಅರಣ್ಯ ಇಲಾಖೆ ಅವರ ಜೊತೆ ಮಾತನಾಡಿ ದಿಗ್ಬಂಧನೆಗೊಂಡಿದ್ದ ಅರಣ್ಯ ಇಲಾಖೆಯವರನ್ನು ಬಿಡುಗಡೆಗೊಳಿಸಿದರು.
