
ಮಂಡ್ಯ: ಹನುಮ ಜಯಂತಿ ಪ್ರಯುಕ್ತ ರಾಜ್ಯದೆಲ್ಲೆಡೆ ಹನುಮ ಭಕ್ತರು ಬಹಳ ವಿಜೃಂಭಣೆಯಿಂದ ಹನುಮ ಜಯಂತಿ ಆಚರಿಸುತ್ತಿದ್ದಾರೆ. ಸಾವಿರಾರು ಲಕ್ಷಾಂತರ ಭಕ್ತರು ಹನು ಮಾಲೆಯನ್ನ ಧರಿಸಿ ವ್ರತ ಕೈಗೊಂಡಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು, ಚಿಕ್ಕಮಗಳೂರು ಹೀಗೆ ರಾಜ್ಯದ ಹಲವು ಕಡೆ ಹನುಮ ಭಕ್ತರು ಸಂಕೀರ್ತನಾ ಯಾತ್ರೆಯನ್ನ ಆಯೋಜಿಸಿದ್ದಾರೆ. ಆದ್ರೆ, ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದಲ್ಲಿ ಹನುಮ ಸಂಕೀರ್ತನಾ ವೇಳೆ ಹೈಡ್ರಾಮಾ ನಡೆದಿದೆ.
ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ಹನುಮ ಸಂಕೀರ್ತನ ಯಾತ್ರೆ ವೇಳೆ ಭಾರಿ ಹೈಡ್ರಾಮಾ ನಡೆದಿದೆ. ಶ್ರೀರಂಗಪಟ್ಟಣದ ಜಾಮೀಯ ಮಸೀದಿ ಬಳಿ ಸಂಕೀರ್ತನ ಯಾತ್ರೆ ಬರುತ್ತಿದ್ದಂತೆ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹನುಮ ಮಾಲಾಧಾರಿಗಳು ಜಾಮೀಯ ಮಸೀದಿ ವೃತ್ತದಲ್ಲಿ ಕುಳಿತು ಹನುಮಾನ್ ಚಾಲಿಸ್ ಪಠಣ ಮಾಡಿದ್ದಾರೆ. ಈ ವೇಳೆ ಕೆಲವರು ಮಸೀದಿಗೆ ನುಗ್ಗಲು ಯತ್ನಿಸಿದ್ದು, ತಳ್ಳಾಟ-ನೂಕಾಟ ಉಂಟಾಗಿತ್ತು.
ಸದ್ಯ, ಸಂಕೀರ್ತನ ಯಾತ್ರೆ ಸಮಾಪ್ತಿಯಾಗಿದ್ದು, ಮೂಡಲ ಬಾಗಿಲು ಆಂಜನೇಯನ ದರ್ಶನ ಪಡೆದ ಹನುಮ ಮಾಲಾಧಾರಿಗಳು, ಶ್ರೀರಂಗನಾಥ ದೇಗುಲದ ಆವರಣದಲ್ಲಿ ಮಾಲೆ ವಿಸರ್ಜನೆ ಮಾಡಿದ್ದಾರೆ. ವಿವಾದಿತ ಮಸೀದಿ ವೃತ್ತದಿಂದ ಸಂಕೀರ್ತನ ಯಾತ್ರೆ ಮುಂದೆ ಸಾಗಿದ ಹಿನ್ನೆಲೆ, ಪೊಲೀಸರು ಮತ್ತು ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದ್ದಾರೆ.
