ಗುರುಮಠಕಲ್: ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯದಲ್ಲಿ ನಿನ್ನೆ ರಾತ್ರಿ ಆಹಾರ ಸೇವಿಸಿದ ತಕ್ಷಣ ಸುಮಾರು 28 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ವಿಷಪೂರಿತ ಆಹಾರ ಸೇವನೆ ಶಂಕೆಯಿಂದ ಎಲ್ಲಾ ವಿದ್ಯಾರ್ಥಿನಿಯರನ್ನು ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಇವರಲ್ಲಿ ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದ್ದರಿಂದ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಕುರಿತು ಜಯ ಕರ್ನಾಟಕ ಸಂಘಟನೆ – ಗುರುಮಠಕಲ್ ತಾಲೂಕು ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವಸತಿ ನಿಲಯದ ವಾರ್ಡನ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ನೇರ ಹೊಣೆಗಾರರು ಎಂದು ಸಂಘಟನೆಯು ಹೇಳಿದೆ.
ಸಂಘಟನೆಯ ತಾಲೂಕು ಅಧ್ಯಕ್ಷರಾದ ನಾಗೇಶ್ ಗದ್ದಿಗಿ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ;
ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಲು,
ವಸತಿ ನಿಲಯದ ಅಸಮರ್ಪಕ ನಿರ್ವಹಣೆಗೆ ಕಾರಣರಾದ ಸಿಬ್ಬಂದಿಯನ್ನು ತಕ್ಷಣ ವರ್ಗಾವಣೆ
ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ FIR ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಿ
ಜಿಲ್ಲಾ ಆಡಳಿತದ ನೇರ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ.
