ಗುವಾಹಟಿ: ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮೆಟೆಂಗ್ಲಿಯಾಂಗ್ ಬಳಿ ಟ್ರಕ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 18 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.ಡಿಸೆಂಬರ್ 8 ರ ರಾತ್ರಿಯೇ ಈ ದುರ್ಘಟನೆ ನಡೆದಿದೆ. ಆದರೆ ಗಾಯಗೊಂಡು ಬದುಕುಳಿದ ಓರ್ವ ಸಂತ್ರಸ್ತ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (GREF) ಶಿಬಿರ ತಲುಪಿ ಘಟನೆಯನ್ನು ವಿವರಿಸಿದ ನಂತರ ಡಿಸೆಂಬರ್ 10 ರಂದು ಅಧಿಕಾರಿಗಳಿಗೆ ಆ ವಿಷಯ ಗೊತ್ತಾಗಿದೆ. ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಸ್ಸಾಂಗೆ ರವಾನಿಸಲಾಗಿದೆ.
22 ಕಾರ್ಮಿಕರ ಗುಂಪು ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಿಂದ ಅಂಜಾವ್ ಜಿಲ್ಲೆಯ ಚಗ್ಲಗಾಮ್ಗೆ ಡಿಸೆಂಬರ್ 7 ರಂದು ನಿರ್ಮಾಣ ಸ್ಥಳಕ್ಕೆ ತೆರಳಿತ್ತು. ಅವರು ಸಮಯಕ್ಕೆ ಸರಿಯಾಗಿ ತಲುಪಬೇಕಾದ ಸ್ಥಳ ತಲುಪದೇ ಇದ್ದಾಗ ಸಹ ಕಾರ್ಮಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರ ದೂರಿನ ಆಧಾರದ ಮೇಲೆ, ಅಂಜಾವ್ ಜಿಲ್ಲೆಯ ಹಯುಲಿಯಾಂಗ್ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಬದುಕುಳಿದಿದ್ದ ಏಕೈಕ ಸಂತ್ರಸ್ತನ ಬಗ್ಗೆ GREF ಶಿಬಿರದಿಂದ ಮಾಹಿತಿ ಪಡೆದುಕೊಂಡಿದ್ದಾರೆ.
