ಚೆನ್ನೈ: ತಮಿಳುನಾಡಿನ ಜನಪ್ರಿಯ ನಟ ದಳಪತಿ ವಿಜಯ್ ಅವರು ಸ್ಥಾಪಿಸಿದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಇಂದಿಗೆ (ಫೆಬ್ರವರಿ 2, 2026) ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿ, ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯ್, ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದೇ ನಮ್ಮ ಏಕೈಕ ಗುರಿ ಎಂದು ಹೇಳಿದ್ದಾರೆ.
“ತಮಿಳುನಾಡಿನ ರಾಜಕೀಯ ವಾತಾವರಣ ಈಗ ಹಿಂದೆಂದಿಗಿಂತಲೂ ಹೆಚ್ಚು ಕಾವೇರಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಪ್ರವೇಶ. ನಮ್ಮ ಸಿದ್ಧಾಂತ ಮತ್ತು ನಡೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿವೆ,” ಎಂದು ವಿಜಯ್ ಹೇಳಿದ್ದಾರೆ. ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುವ ಸೂಚನೆಯನ್ನು ಅವರು ಈ ಮೂಲಕ ನೀಡಿದ್ದಾರೆ.
https://x.com/TVKVijayHQ/status/2018141075408617568?s=20
ಆಳ ಸಮುದ್ರದಕ್ಕೆ ಹೋಲಿಸಿದ ವಿಜಯ್:
ತಮ್ಮ ರಾಜಕೀಯ ಪಯಣದ ಬಗ್ಗೆ ಮಾತನಾಡಿದ ವಿಜಯ್, ಪಕ್ಷವನ್ನು ‘ಆಳವಾದ ಸಮುದ್ರ’ಕ್ಕೆ ಹೋಲಿಸಿದ್ದಾರೆ. “ನಮ್ಮ ರಾಜಕೀಯ ಪ್ರಯಾಣವು ನಾವು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಮತ್ತು ಸಹಜವಾಗಿ ಸಾಗುತ್ತಿದೆ. ಟಿವಿಕೆ ಎಂಬುದು ಅಳೆಯಲಾಗದ ಆಳ ಸಮುದ್ರವಿದ್ದಂತೆ. ಇದು ಎಂತಹ ಅಡೆತಡೆಗಳು ಎದುರಾದರೂ ಅಳುಕದೆ, ತನ್ನ ಸಮತೋಲನವನ್ನು ಕಾಯ್ದುಕೊಂಡು ಮುನ್ನುಗ್ಗುತ್ತಿದೆ,” ಎಂದು ಪಕ್ಷದ ಸ್ಥಿರತೆಯನ್ನು ಬಣ್ಣಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಪಕ್ಷದ ಕಾರ್ಯಕರ್ತರು ತೋರಿದ ನಿಷ್ಠೆ ಮತ್ತು ಶ್ರಮವನ್ನು ಅವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ | ಸೌಂಡ್ ಪ್ರೂಫ್ ಕೊಠಡಿಯಲ್ಲಿ 20 ನಿಮಿಷಗಳ ಮೌನ: ಸಿ.ಜೆ. ರಾಯ್ ಆತ್ಮಹತ್ಯೆಯ ಆಘಾತಕಾರಿ ವಿಷಯ ಬಯಲು
2024ರ ಫೆಬ್ರವರಿ 2 ರಂದು ಪಕ್ಷ ಘೋಷಣೆ ಮಾಡಿದಾಗ ವಿಜಯ್ ಅವರು ಸಿನಿಮಾದಿಂದ ನಿಧಾನವಾಗಿ ದೂರ ಸರಿದು, ಪೂರ್ಣಾವಧಿ ರಾಜಕಾರಣಿಯಾಗುವ ನಿರ್ಧಾರ ಪ್ರಕಟಿಸಿದ್ದರು. ಇದೀಗ 2026ರ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಅವರು ತಮ್ಮ ಕಾರ್ಯಕರ್ತರಿಗೆ (Thondargal) ಯುದ್ಧಕ್ಕೆ ಸಜ್ಜಾಗುವಂತೆ ಕರೆ ನೀಡಿದ್ದಾರೆ. “ನಮ್ಮ ಗುರಿ ಕೇವಲ ಸ್ಪರ್ಧಿಸುವುದಲ್ಲ, ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು. ಜನರ ನಂಬಿಕೆಯನ್ನು ನಾವು ಉಳಿಸಿಕೊಳ್ಳಬೇಕು,” ಎಂದು ಅವರು ಕಿವಿಮಾತು ಹೇಳಿದ್ದಾರೆ.
