ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ‘ (Namma Metro) ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆಯ ಬಿಸಿ ಮುಟ್ಟುವ ಸಾಧ್ಯತೆಯಿದೆ. ಟಿಕೆಟ್ ದರ ಏರಿಕೆ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದರೂ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಇತ್ತೀಚೆಗೆ ನಡೆದ ಬಿಎಂಆರ್ಸಿಎಲ್ ಆಡಳಿತ ಮಂಡಳಿ (Board Meeting) ಸಭೆಯಲ್ಲಿ ಮೆಟ್ರೋ ಟಿಕೆಟ್ ದರವನ್ನು ಶೇ. 5ರಷ್ಟು ಹೆಚ್ಚಿಸಲು ಅಧಿಕೃತವಾಗಿ ಒಪ್ಪಿಗೆ ನೀಡಲಾಗಿದೆ.
ದರ ನಿಗದಿ ಸಮಿತಿ (Fare Fixation Committee – FFC) ನೀಡಿದ ಶಿಫಾರಸಿನ ಅನ್ವಯ, ಪ್ರತಿ ವರ್ಷ ಮೆಟ್ರೋ ಟಿಕೆಟ್ ದರವನ್ನು ಪರಿಷ್ಕರಣೆ ಮಾಡಲು ಅವಕಾಶವಿದೆ. ನಿರ್ವಹಣಾ ವೆಚ್ಚ, ವಿದ್ಯುತ್ ದರ ಏರಿಕೆ ಮತ್ತು ಸಿಬ್ಬಂದಿ ವೇತನ ಸೇರಿದಂತೆ ಆರ್ಥಿಕ ಹೊರೆಯನ್ನು ನಿಭಾಯಿಸಲು ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್ಸಿಎಲ್ ಸಮರ್ಥಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೋರ್ಡ್ ಸಭೆಯಲ್ಲಿ ಶೇ. 5ರಷ್ಟು ದರ ಹೆಚ್ಚಳದ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ.
ಸರ್ಕಾರದ ಅನುಮತಿಗಾಗಿ ಕಸರತ್ತು:
ಬೋರ್ಡ್ ಒಪ್ಪಿಗೆ ನೀಡಿದ್ದರೂ, ದರ ಏರಿಕೆ ಜಾರಿಗೆ ಬರಲು ರಾಜ್ಯ ಸರ್ಕಾರದ ಅಧಿಕೃತ ಅನುಮತಿ ಕಡ್ಡಾಯವಾಗಿದೆ. ಈ ಹಿಂದೆ ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಸ್ತಾಪವನ್ನು ತಡೆಹಿಡಿದಿತ್ತು. ಆದರೆ ಇದೀಗ, ಬಿಎಂಆರ್ಸಿಎಲ್ ಅಧಿಕಾರಿಗಳು ದರ ಏರಿಕೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡಲು ಸರ್ಕಾರದ ಮಟ್ಟದಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಕಡತವು ನಗರಾಭಿವೃದ್ಧಿ ಇಲಾಖೆ ಮತ್ತು ಮುಖ್ಯಮಂತ್ರಿಗಳ ಪರಿಶೀಲನೆಗೆ ರವಾನೆಯಾಗಲಿದ್ದು, ಅಲ್ಲಿ ಒಪ್ಪಿಗೆ ಸಿಕ್ಕರೆ ಮಾತ್ರ ಪರಿಷ್ಕೃತ ದರ ಜಾರಿಯಾಗಲಿದೆ.
ಇದನ್ನೂ ಓದಿ | ವಿಧಾನಸಭೆಯಲ್ಲಿ ‘ಲಂಚ’ದ ಗದ್ದಲ: ಅಬಕಾರಿ ಸಚಿವ ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು
ಪ್ರಯಾಣಿಕರ ಆಕ್ರೋಶ:
ಈಗಾಗಲೇ ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದ್ದು, ಜನಸಾಮಾನ್ಯರು ಮೆಟ್ರೋವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಕಳೆದ ವರ್ಷವಷ್ಟೇ ದರ ಏರಿಕೆ ಮಾಡಲಾಗಿತ್ತು, ಈಗ ಮತ್ತೆ ಶೇ.5ರಷ್ಟು ಏರಿಕೆ ಮಾಡಿದರೆ ಅದು ಮಧ್ಯಮ ವರ್ಗದವರ ಜೇಬಿಗೆ ಹೊರೆಯಾಗಲಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಸೇವೆಯನ್ನು ವಿಸ್ತರಿಸುವ ಬದಲು ಕೇವಲ ದರ ಏರಿಕೆ ಮಾಡುವುದು ಸರಿಯಲ್ಲ,” ಎಂಬುದು ನಿತ್ಯ ಪ್ರಯಾಣಿಕರ ವಾದವಾಗಿದೆ.
