ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ಅಧಿವೇಶನದ ಕಲಾಪಗಳು ನಡೆಯುತ್ತಿದ್ದು, ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾದ ವ್ಯಾಪಕ ಭ್ರಷ್ಟಾಚಾರದ ಆರೋಪ ವಿಧಾನಸಭೆಯನ್ನು ರಣರಂಗವನ್ನಾಗಿ ಮಾಡಿದೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ (R.B. Timmapur) ಅವರ ನೇತೃತ್ವದ ಇಲಾಖೆಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ಭಾರೀ ಗದ್ದಲ ಎಬ್ಬಿಸಿ, ಸಚಿವರ ರಾಜೀನಾಮೆಗೆ ಪಟ್ಟು ಹಿಡಿದರು.
ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R. Ashoka), ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು. “ಅಬಕಾರಿ ಇಲಾಖೆಯು ರಾಜ್ಯದ ಖಜಾನೆ ತುಂಬುವ ಇಲಾಖೆಯಾಗುವ ಬದಲು, ಸಚಿವರ ಮತ್ತು ಆಡಳಿತ ಪಕ್ಷದ ಜೇಬು ತುಂಬುವ ಇಲಾಖೆಯಾಗಿದೆ. ಇಲ್ಲಿ ಪ್ರತಿಯೊಂದಕ್ಕೂ ದರ ನಿಗದಿ ಮಾಡಲಾಗಿದೆ (Rate Card). ಅಧಿಕಾರಿಗಳ ವರ್ಗಾವಣೆಗೆ ಇಂತಿಷ್ಟು, ಬಾರ್ ಲೈಸೆನ್ಸ್ ನೀಡಲು ಇಂತಿಷ್ಟು ಎಂದು ಲಂಚ ಪಡೆಯಲಾಗುತ್ತಿದೆ,” ಎಂದು ಗಂಭೀರ ಆರೋಪ ಮಾಡಿದರು.
ಆಡಿಯೋ ಸಾಕ್ಷ್ಯ ಪ್ರಸ್ತಾಪ:
ತಮ್ಮ ಆರೋಪಕ್ಕೆ ಪೂರಕವಾಗಿ ಮಾತನಾಡಿದ ಅಶೋಕ್, “ನನ್ನ ಬಳಿ ಕೇವಲ ಆರೋಪಗಳಿಲ್ಲ, ಸಾಕ್ಷ್ಯಗಳೂ ಇವೆ. ಲಂಚಕ್ಕೆ ಬೇಡಿಕೆ ಇಟ್ಟಿರುವ ಮತ್ತು ಡೀಲ್ ಕುದುರಿಸಿರುವ ಆಡಿಯೋ ರೆಕಾರ್ಡಿಂಗ್ಗಳು (Audio Recordings) ಬಹಿರಂಗವಾಗಿವೆ. ಈ ಬಗ್ಗೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ಕೂಡ ದಾಖಲಾಗಿದೆ. ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಸಚಿವರು ಇನ್ನೂ ಅಧಿಕಾರದಲ್ಲಿ ಮುಂದುವರಿಯುವುದು ಎಷ್ಟು ಸರಿ? ಅವರು ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು,” ಎಂದು ಆಗ್ರಹಿಸಿದರು.
ಇದನ್ನೂ ಓದಿ | “ನನ್ನ ಧ್ವನಿ ಅಡಗಿಸುವ ಪ್ರಯತ್ನ ನಡೆದಿದೆ” : ಕೇಂದ್ರದ ವಿರುದ್ಧ ರಾಗಾ ಕಿಡಿ
ಬಿಜೆಪಿಯ ಈ ಹೋರಾಟಕ್ಕೆ ಜೆಡಿಎಸ್ ಕೂಡ ದನಿಗೂಡಿಸಿತು. ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಣ ಕೊಡದಿದ್ದರೆ ದಕ್ಷ ಅಧಿಕಾರಿಗಳನ್ನೂ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಜೆಡಿಎಸ್ ಸದಸ್ಯರು ದೂರಿದರು.
