ಕರ್ನಾಟಕ ಕಾಂಗ್ರೆಸ್ನಲ್ಲಿ ‘ಅಧಿಕಾರ ಹಂಚಿಕೆ’ ಎಂಬುದು ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ತಾವು ನಡೆಸಿದ ಮಾತುಕತೆಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. “ನಾನು ಮತ್ತು ಸಿದ್ದರಾಮಯ್ಯ ಏನು ಮಾತಾಡಿಕೊಂಡಿದ್ದೇವೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ನಾವು ಯಾವುದನ್ನೂ ಕದ್ದುಮುಚ್ಚಿ ಮಾತಾಡಿಲ್ಲ,” ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಗೊಂದಲ ನಮಗಿಲ್ಲ, ಬೇರೆಯವರಿಗೆ!
ದೆಹಲಿ ಪ್ರವಾಸಕ್ಕೆ ತೆರಳುವ ಮುನ್ನ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾಯಕತ್ವದ ಬಗ್ಗೆ ಎದ್ದಿರುವ ವದಂತಿಗಳಿಗೆ ಬ್ರೇಕ್ ಹಾಕಲು ಪ್ರಯತ್ನಿಸಿದರು. “ಗೊಂದಲಗಳು ಬೇರೆಯವರಿಗೆ ಇರಬಹುದು, ಆದರೆ ನನಗೆ ಯಾವುದೇ ಗೊಂದಲವಿಲ್ಲ. ನಾವು ಮತ್ತು ನಮ್ಮ ಪಕ್ಷದ ಹೈಕಮಾಂಡ್ ನಾಯಕರು ಕುಳಿತು ಚರ್ಚಿಸಿದ್ದೇವೆ. ಎಲ್ಲವೂ ಪಾರದರ್ಶಕವಾಗಿದೆ,” ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು “ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಇರುತ್ತಾರೆ” ಎಂದು ನೀಡಿದ್ದ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ ಡಿಕೆಶಿ, “ಬೇರೆಯವರು ಟೆನ್ಶನ್ ತೆಗೆದುಕೊಳ್ಳುವುದರಿಂದ ಅಥವಾ ಅನಗತ್ಯ ಹೇಳಿಕೆ ನೀಡುವುದರಿಂದ ಯಾರಿಗೂ ಲಾಭವಿಲ್ಲ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಮೌನವಾಗಿರುವುದು ಒಳ್ಳೆಯದು,” ಎಂದರು.
ಇದನ್ನೂ ಓದಿ | ಎಂಎಸ್ಐಎಲ್ ಚಿಟ್ಸ್ಗೆ ಡಿಜಿಟಲ್ ಸ್ಪರ್ಶ: ಆ್ಯಪ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬಜೆಟ್ ಸಭೆ ಬಿಟ್ಟು ದೆಹಲಿಗೆ ಯಾಕೆ?
ಇಂದು ಮುಖ್ಯಮಂತ್ರಿಗಳು ಕರೆದಿದ್ದ ಬಜೆಟ್ ಪೂರ್ವಭಾವಿ ಸಭೆಗೆ ಗೈರಾಗಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ದೌಡಾಯಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಎಐಸಿಸಿ (AICC) ಕರೆಯ ಮೇರೆಗೆ ತಾವು ದೆಹಲಿಗೆ ಹೋಗುತ್ತಿರುವುದಾಗಿ ತಿಳಿಸಿದ ಅವರು, “ನಾನು ಕೇವಲ ಡಿಸಿಎಂ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷ ಕೂಡ. ಪಕ್ಷದ ಸಂಘಟನೆ ಮತ್ತು ಮುಂಬರುವ ಚುನಾವಣೆಗಳ ಬಗ್ಗೆ ಚರ್ಚಿಸಲು ಹೈಕಮಾಂಡ್ ಕರೆದಿದೆ,” ಎಂದು ಸಮರ್ಥಿಸಿಕೊಂಡರು.
